ಗದಗ, ಆ. 15 (DaijiworldNews/AA): ಧರ್ಮಸ್ಥಳ ಪ್ರಕರಣವನ್ನು ರಾಜಕೀಯಕ್ಕೆ ಬಳಕೆ ಮಾಡಲು ಸಾಧ್ಯನಾ ಅಂತ ನೋಡಲು ಪ್ರಯತ್ನ ಮಾಡ್ತಿದ್ದಾರೆ. ಅಂತವರಿಗೆ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾತನಾಡಿದ ಅವರು, "ಧರ್ಮಸ್ಥಳದ ವಿಷಯ ವಿಧಾನಸಭೆ ಒಳಗೆ ಚರ್ಚೆಗೆ ಬಂದಿದೆ. ಗೃಹ ಸಚಿವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅನಾಮಿಕ ವ್ಯಕ್ತಿ ನ್ಯಾಯಾಲಯದಲ್ಲಿ ಸಿಆರ್ಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ನೀಡಿದ್ದ. ಅದರ ಬಗ್ಗೆ ನ್ಯಾಯಯುತವಾಗಿ ತನಿಖೆ ನಡೆಯಬೇಕಾಗಿತ್ತು. ಆ ತನಿಖೆ ನಡೆದಿದೆ. ತನಿಖೆಯು ಯಾವ ಹಂತದಲ್ಲಿದೆ ಎಂಬ ಕೆಲವು ಭಾಗ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಈ ಬಗ್ಗೆ ಬಹುಶಃ ಸೋಮವಾರ ಇನ್ನು ಹೆಚ್ಚಿನ ಮಾಹಿತಿಯನ್ನು ಗೃಹ ಸಚಿವರು ನೀಡುತ್ತಾರೆ" ಎಂದು ಹೇಳಿದರು.
"ಶಾಸನ ಸಭೆಯಲ್ಲಿ ಚರ್ಚೆ ಮಾಡಿದ್ದರಿಂದ ಸೋಮವಾರ ಸರ್ಕಾರ ತನ್ನ ಉತ್ತರ ನೀಡಲಿದೆ. ನಾವು ಧರ್ಮಸ್ಥಳ ಮಂಜುನಾಥನ ಸನ್ನಿಧಾನ ಬಗ್ಗೆ ವಿಶೇಷ ಭಕ್ತಿ, ಗೌರವ, ಅಭಿಮಾನ ಹೊಂದಿದವರು. ಆದ್ದರಿಂದ ಸರ್ಕಾರದ ಬಗ್ಗೆ ಯಾರು ಅನುಮಾನದ ಮಾತುಗಳನ್ನಾಡುತ್ತಿದ್ದಾರೆ. ಅವರು ಕೇವಲ ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ. ಇವತ್ತು ಮಾತನಾಡುವವರು 10 ದಿನಗಳ ಹಿಂದೆ ಯಾಕೆ ಮಾತನಾಡಲಿಲ್ಲ? ಸಮಯದ ಉಪಯೋಗ ಮಾಡಿಕೊಂಡು ಏನಾದ್ರು ಮಾಡುವ ಪ್ರಯತ್ನಿಸಿದರೆ ಅದರಿಂದ ಏನು ಲಾಭ ಆಗುವುದಿಲ್ಲ" ಎಂದರು.