ನವದೆಹಲಿ, ಆ. 15 (DaijiworldNews/TA): ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಏಳು ಮಂದಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪರಿಗಣಿಸುವಲ್ಲಿ ಗಂಭೀರ ಹಗರಣವಾಗಿದೆ ಎಂಬ ಕಾರಣದಿಂದ, ಸುಪ್ರೀಂಕೋರ್ಟ್ ಇಂದು ಗಂಭೀರ ತೀರ್ಪು ಪ್ರಕಟಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್ ಮತ್ತು ಇತರರು ಜಾಮೀನಿನ ಹಿನ್ನಲೆಯಲ್ಲಿ ಹೊರಗಿದ್ದರೂ, ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಜಾಮೀನನ್ನು ರದ್ದುಗೊಳಿಸಿ ತೀರ್ಪು ನೀಡಿದೆ.

"ಯಾರೂ ಕಾನೂನಿಗಿಂತ ಮೇಲಲ್ಲ. ಆರೋಪಿ ಎಷ್ಟೇ ಪ್ರಸಿದ್ಧ ವ್ಯಕ್ತಿಯಾದರೂ ಕೂಡ ಕಾನೂನಿನ ಮುಂದೆ ಎಲ್ಲರೂ ಸಮಾನರು," ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಈ ತೀರ್ಪು ಕೇವಲ ದರ್ಶನ್ ಪ್ರಕರಣಕ್ಕೆ ಮಾತ್ರ ಸೀಮಿತವಲ್ಲದೆ, ದೇಶದಾದ್ಯಾಂತ ಜೈಲು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಮಹತ್ವದ ಸಂದೇಶವನ್ನು ನೀಡಿದೆ.
ಜೈಲಿನಲ್ಲಿ '5 ಸ್ಟಾರ್' ಸವಲತ್ತುಗಳು? ಅಧಿಕಾರಿಗಳ ವಿರುದ್ಧ ಕಠಿಣ ಎಚ್ಚರಿಕೆ: ಜೈಲಿನೊಳಗೆ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಅನಧಿಕೃತ ಸವಲತ್ತುಗಳು ನೀಡಲ್ಪಟ್ಟಿರುವುದು ಸುಪ್ರೀಂಕೋರ್ಟ್ ಗಮನಸೆಳೆದಿದೆ. ವಿಡಿಯೋಗಳು ಮತ್ತು ಫೋಟೋಗಳಲ್ಲಿ ದರ್ಶನ್ ಸಿಗರೇಟು ಸೇದುತ್ತಿರುವ ದೃಶ್ಯಗಳು ನಿಖರವಾಗಿ ದಾಖಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, “ಇದೊಂದು ಪವಿತ್ರ ಸಂಸ್ಥೆಗೆ ಅವಮಾನ,” ಎಂದು ಹೇಳಿದ್ದು, ಇಂತಹ ವ್ಯವಸ್ಥೆ ಮತ್ತೆ ಕಂಡುಬಂದರೆ ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಹೈಕೋರ್ಟ್ ನಿರ್ಧಾರದ ವಿರುದ್ಧ ಶಾಕ್ : ಹೈಕೋರ್ಟ್ ನೀಡಿದ್ದ ಜಾಮೀನನ್ನು ಆಕ್ಷೇಪಿಸಿರುವ ಸುಪ್ರೀಂಕೋರ್ಟ್, “ಪ್ರಕರಣದ ಗಂಭೀರತೆಯನ್ನು ವೈಚಾರಿಕವಾಗಿ ಪರಿಗಣಿಸದೇ ಜಾಮೀನು ನೀಡಲಾಗಿದೆ. ಸಾಕ್ಷ್ಯ ಪರಿಶೀಲನೆಗೆ ಟ್ರಯಲ್ ಕೋರ್ಟ್ ವೇ ಸೂಕ್ತ ವೇದಿಕೆ” ಎಂದು ಸ್ಫಷ್ಟಪಡಿಸಿದೆ. ಹೀಗಾಗಿ, ಹೈಕೋರ್ಟ್ಗಳಿಗೂ, ತಮ್ಮ ಪರಿಧಿ ಯಾವ ಮಟ್ಟದವರೆಗೆ ಎಂಬುದು ಸ್ಮರಣೆಯಾಗಬೇಕೆಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ತೀರ್ಪಿನ ಪ್ರತಿ ಎಲ್ಲ ಹೈಕೋರ್ಟ್ ಮತ್ತು ಜೈಲುಗಳಿಗೆ ಕಳುಹಿಸಲು ಆದೇಶ: ಜೈಲುಗಳಲ್ಲಿ ನಡೆಯುತ್ತಿರುವ ಅನಿಯಮಿತ ಕ್ರಿಯೆಗಳಿಗೆ ತಡೆ ನೀಡುವ ಉದ್ದೇಶದಿಂದ, ಈ ತೀರ್ಪಿನ ಪ್ರತಿಯನ್ನು ದೇಶದ ಎಲ್ಲಾ ಹೈಕೋರ್ಟ್ಗಳು ಮತ್ತು ಜೈಲುಗಳಿಗೆ ಕಳುಹಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಇದರೊಂದಿಗೆ, ಯಾವುದೇ ಆರೋಪಿ ವಿರುದ್ಧ ನ್ಯಾಯಾಂಗ ವೈಮನಸ್ಯವಿಲ್ಲದಂತೆ ಕಾನೂನು ಅನುಷ್ಠಾನಗೊಳ್ಳಬೇಕು ಎಂಬುದನ್ನು ಪುನಃ ಒತ್ತಿ ಹೇಳಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದರೆನ್ನಲಾದ ಕಾರಣದಿಂದ, 2024ರ ಜೂನ್ನಲ್ಲಿ, ದರ್ಶನ್ ಹಾಗೂ ಅವರ ಬೆಂಬಲಿಗರು ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಆರೋಪಗಳ ಮೇಲೆ ಬಂಧಿಸಲಾಗಿದೆ. ಡಿಸೆಂಬರ್ 13ರಂದು ಹೈಕೋರ್ಟ್ ಜಾಮೀನು ನೀಡಿದ್ದರೂ, ಇದೀಗ ಸುಪ್ರೀಂಕೋರ್ಟ್ ಆ ತೀರ್ಪನ್ನು ವಜಾಗೊಳಿಸಿದೆ.