ನವದೆಹಲಿ, ಆ. 08 (DaijiworldNews/AA): "ರಾಹುಲ್ ಗಾಂಧಿ ಅವರನ್ನು ಅಧಿಕಾರದಿಂದ ಜನರು ಹಾಕಿದ ಮೇಲೆ ಸುಳ್ಳಿನ ಅಂಗಡಿ ತೆಗೆಯುತ್ತಾರೆ. ಇವರ ಅಜ್ಜಿ ತುರ್ತು ಪರಿಸ್ಥಿತಿ ಹೇರಿದವರು. ಇವರು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ಮತಗಳ್ಳತನದ ಆರೋಪ ಮಾಡಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರಾಹುಲ್ ಗಾಂಧಿಯವರ ಕುರಿತು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಗುರುವಾರ ಮತಗಳ್ಳತನದ ಆರೋಪ ಮಾಡಿ, ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಯಾಕೆ ಪ್ರತಿಭಟನೆ ನಡೆಸಿದ್ದಾರೆ ಎಂದು ಕೇಳಿದ್ರೆ ಅವರಿಗೆ ಗೊತ್ತಿರಲ್ಲ. ರಾಜ್ಯ ಚುನಾವಣಾ ಆಯೋಗ ಬಂದು ಸ್ಪಷ್ಟನೆ ನೀಡಿ ಎಂದು ಕೇಳಿದೆ. ಫ್ರೀಡಂ ಪಾರ್ಕ್ನಿಂದ ಆಯೋಗದ ಕಚೇರಿಗೆ ನಡೆದು ಹೋದರೆ 5 ನಿಮಿಷ. ಆದರೆ ಆಯೋಗದ ಕಚೇರಿಗೆ ಹೋಗಿಲ್ಲ. ಬೇರೆ ಯಾರನ್ನೊ ಕಳುಹಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ ಮಾಡಿ ಇನ್ಯಾರನ್ನೋ ಉತ್ತರ ಕೊಡಿಸಲು ಕಳಿಸಿದರೆ, ನಿಮ್ಮ ಸುಳ್ಳು ಆರೋಪಕ್ಕೆ ಆಧಾರ ಇಲ್ಲ ಅಂತ ಅರ್ಥ. ಎಲ್ಲ ರಾಜ್ಯಗಳ ಚುನಾವಣಾ ಆಯೋಗ ಅಫಿಡವಿಟ್ ಕೇಳಿವೆ. ಈವರೆಗೂ ಅಫಿಡವಿಟ್ ಫೈಲ್ ಮಾಡಿಲ್ಲ. ರಾಹುಲ್ ಸ್ಥಿತಿ ಹೇಗೆಂದರೆ ಸರ್ಕಾರದಲ್ಲಿ ಇದ್ದಾಗ ಲೂಟಿಯ ಅಂಗಡಿ. ಚುನಾವಣೆಯಲ್ಲಿ ಮಾತ್ರ ಅವರಿಗೆ ಪ್ರೀತಿಯ ಅಂಗಡಿ ಎಂದು ಕಿಡಿಕಾರಿದರು.