ನವದೆಹಲಿ, ಆ. 6 (DaijiworldNews/AK): ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ(PMGSY)ಗೆ ನಿಗದಿಪಡಿಸಿರುವ ಮಾನದಂಡ/ ಮಾರ್ಗಸೂಚಿಗಳಲ್ಲಿ ತಿದ್ದುಪಡಿ ತಂದು ಈ ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ಸವಾಲು ಬಗೆಹರಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ನಿಯಮ 377ರಡಿ ಈ ಮಹತ್ವದ ವಿಷಯ ಪ್ರಸ್ತಾಪಿಸಿರುವ ಅವರು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-1, ಹಂತ-2 ಹಾಗೂ ಹಂತ-3 ದೇಶದ ಗ್ರಾಮೀಣ ಭಾಗದ ರಸ್ತೆ ಸಂಪರ್ಕವನ್ನು ಸುಧಾರಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದೆ. ಇದರ ಮುಂದಿನ ಹಂತದ ಪಿಎಂಜಿಎಸ್ವೈ-IV ಯೋಜನೆಯು ಉತ್ತಮ ಗುಣಮಟ್ಟದ ಮತ್ತು ಹವಾಮಾನ ವೈಪರೀತ್ಯ ಸವಾಲು ತಡೆದುಕೊಳ್ಳಬಲ್ಲ ರಸ್ತೆಗಳ ನಿರ್ಮಾಣದ ಮೇಲೆ ಕೇಂದ್ರೀಕರಿಸಿರುವುದು ಶ್ಲಾಘನೀಯ. ಆದರೆ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಜಿಲ್ಲೆ ಹಾಗೂ ಮಲೆನಾಡು ಜಿಲ್ಲೆಗಳ ಸ್ವರೂಪವು ಭೌಗೋಳಿಕವಾಗಿ ಸಾಕಷ್ಟು ಭಿನ್ನತೆ ಹೊಂದಿದೆ. ಹೀಗಿರುವಾಗ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯು ದಕ್ಷಿಣ ಕನ್ನಡದಂಥ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವುದಕ್ಕೆ ವಾಸ್ತವಿಕ ನೆಲೆಯಲ್ಲಿ ಅದರ ಮಾರ್ಗಸೂಚಿ-ನಿಯಮಗಳಿಂದಾಗಿ ಸಾಕಷ್ಟು ಅಡ್ಡಿ ಎದುರಾಗಿದೆ ಎಂದಿದ್ದಾರೆ.
ದಕ್ಷಿಣ ಕನ್ನಡದಂಥಹ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿ ಅರ್ಥಮಾಡಿಕೊಳ್ಳದೆ, ನಿರ್ವಹಣಾ ಮಾಹಿತಿ ವ್ಯವಸ್ಥೆ (MIS) ದತ್ತಾಂಶದ ಪ್ರಕಾರ ’ಸಮತಟ್ಟಾದ ಪ್ರದೇಶ/ ಬಯಲು ಪ್ರದೇಶ’(plain) ಎಂದು ಪರಿಗಣಿಸಲಾಗಿದೆ. ಜಿಲ್ಲೆಯ ಹಲವು ಹಳ್ಳಿಗಳಿಗೆ ರಸ್ತೆ ಸಂಪರ್ಕಗಳಿವೆ ಎಂದು ಗುರುತಿಸಲಾಗಿದ್ದರೂ, ವಾಸ್ತವದಲ್ಲಿ ಗುಡ್ಡಗಾಡು ಪ್ರದೇಶಗಳು, ದಟ್ಟ ಅರಣ್ಯಗಳು, ಮತ್ತು ಭೂಕುಸಿತದ ಅಪಾಯದಿಂದಾಗಿ ಎಲ್ಲಾ ಋತುಗಳಿಗೂ ಯೋಗ್ಯವಾದ ರಸ್ತೆ ಸಂಪರ್ಕವಿರುವುದಿಲ್ಲ. ಹೀಗಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಂಜಿಎಸ್ವೈ-IV ಹಂತ ಅನುಷ್ಠಾನಕ್ಕೆ ನಾನಾ ರೀತಿಯ ತೊಂದರೆ ಎದುರಾಗುವ ಮೂಲಕ ಈ ಯೋಜನೆಯ ಅರ್ಹತೆಯನ್ನು ಸೀಮಿತಗೊಳಿಸಿದೆ ಎಂದು ಅವರು ಸದನದ ಗಮನಸೆಳೆದಿದ್ದಾರೆ.
ಭೌಗೋಳಿಕ ನೆಲೆಯಲ್ಲಿ ನಮ್ಮ ಪ್ರದೇಶಗಳನ್ನು "ಸಮತಲದ ಪ್ರದೇಶ"(plain) ಎಂದು ತಪ್ಪಾಗಿ ವರ್ಗೀಕರಿಸಿರುವುದು ಪಿಎಂಜಿಎಸ್ ವೈ ಯೋಜನೆಯ ಅರ್ಹತೆ ಹಾಗೂ ಅನುದಾನವನ್ನು ಪಡೆದುಕೊಳ್ಳುವುದಕ್ಕೆ ನಾನಾ ರೀತಿಯ ಸವಾಲು ಎದುರಾಗುತ್ತಿವೆ. ಅಲ್ಲದೆ, ಈ ಯೋಜನೆಯಲ್ಲಿ ಜನಸಂಖ್ಯೆಯ ಮಾನದಂಡಗಳ ಪ್ರಕಾರ 1.5 ಕಿ.ಮೀ ರಸ್ತೆಯ ದೂರದಲ್ಲಿ, ಬಯಲು ಪ್ರದೇಶಕ್ಕೆ ಜನಸಂಖ್ಯೆ ಮಿತಿ (500 ಕ್ಕೂ ಮಿಕ್ಕಿ) ಹಾಗೂ ಗುಡ್ಡಗಾಡು ಪ್ರದೇಶದ ಮಿತಿ( 250ಕ್ಕೂ ಮಿಕ್ಕಿ) ಮಾನದಂಡಗಳನ್ನು ಅನ್ವಯಿಸುವುದು ಅಸಾಧ್ಯ. ಈ ಭಾಗಗಳಲ್ಲಿ ತೋಟ, ಗದ್ದೆ, ಹೆಚ್ಚಿನ ಜಮೀನು ಹೊಂದಿದ್ದು, ಚದುರಿದ ಜನವಸತಿ ಇರುವ ಕಾರಣ ಸಣ್ಣ ಹಳ್ಳಿಗಳಿಗೆ ಗ್ರಾಮ ಸಡಕ್ ಯೋಜನೆಯ ಪ್ರಯೋಜನಗಳು ಸಿಗುವುದಿಲ್ಲ. ಚದುರಿದ ವಸತಿ ಪ್ರದೇಶಗಳಲ್ಲಿ ವಾಸಿಸುವ ಕಡಿಮೆ ಜನಸಂಖ್ಯೆಯ ಜನರಿಗೂ ರಸ್ತೆ ಸಂಪರ್ಕ ಒದಗಿಸಲು, ಜನಸಂಖ್ಯೆಯ ಮಾನದಂಡಗಳಲ್ಲಿ ಸೂಕ್ತ ಸಡಿಲಿಕೆ ನೀಡಬೇಕು ಎಂದು ಕ್ಯಾ. ಚೌಟ ಆಗ್ರಹಿಸಿದ್ದಾರೆ.