ನವದೆಹಲಿ, ಆ. 01 (DaijiworldNews/AA): ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ. 25ರಷ್ಟು ಟ್ಯಾರಿಫ್ ವಿಧಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ, ಶಕ್ತಿಶಾಲಿ ಫೈಟರ್ ಜೆಟ್ ಎನಿಸಿದ ಎಫ್-35 ಅನ್ನು ಖರೀದಿಸುವ ಆಸಕ್ತಿ ಇಲ್ಲ ಎಂದು ಅಮೆರಿಕಕ್ಕೆ ಭಾರತ ತಿಳಿಸಿದೆ.

ಪ್ರಧಾನಿ ಮೋದಿ ಅವರ ಅಮೆರಿಕ ಪ್ರವಾಸದ ಸಮಯದಲ್ಲಿ ಟ್ರಂಪ್ ಅಮೆರಿಕ ಭಾರತಕ್ಕೆ ಎಫ್ 35 ವಿಮಾನ ನೀಡುವ ಆಫರ್ ನೀಡಿದ್ದರು. ಈ ಆಫರ್ ಪ್ರಕಟವಾದ ನಂತರ ಭಾರತ ಎಫ್-35 ಖರೀದಿ ಸಂಬಂಧ ಮಾತುಕತೆ ನಡೆಸಿತ್ತು. ಆದರೀಗ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ಟ್ಯಾರಿಫ್ ವಿಧಿಸಿದ ಬೆನ್ನಲ್ಲೇ ಭಾರತ ಎಫ್-35 ಖರೀದಿಸದೇ ಇರಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಸುಂಕ ಹೇರಿಕೆಗೆ ಇದು ಪ್ರತಿಕ್ರಮವಲ್ಲ ಎನ್ನಲಾಗಿದೆ. ಭಾರತ ಇನ್ನೂ ಕೂಡ ಯಾವುದೇ ಪ್ರತಿಸುಂಕ ವಿಧಿಸುವ ಯೋಚನೆ ಮಾಡಿಲ್ಲ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಸಂಬಂಧ ಮಾತುಕತೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಮೋದಿ ಸರ್ಕಾರವು ದೇಶೀಯವಾಗಿ ಜಂಟಿಯಾಗಿ ರಕ್ಷಣಾ ಉಪಕರಣಗಳನ್ನು ವಿನ್ಯಾಸಗೊಳಿಸುವುದು ಮತ್ತು ತಯಾರಿ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ಅಮೆರಿಕಕ್ಕೆ ತಿಳಿಸಿದೆ ಎನ್ನಲಾಗಿದೆ.