ಪಾಟ್ನಾ, ಆ. 01 (DaijiworldNews/AA): ಬಿಸಿಯೂಟ ತಯಾರಕರು, ರಾತ್ರಿ ಕಾವಲುಗಾರರು ಹಾಗೂ ಗೌರವ ಧನವನ್ನ ಹೆಚ್ಚಳ ಮಾಡಲಾಗಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಶಿಕ್ಷಣ ವ್ಯವಸ್ಥೆ ಬಲಪಡಿಸುವಲ್ಲಿ ಅಡುಗೆಯವರು, ರಾತ್ರಿ ಕಾವಲುಗಾರರು ಮತ್ತು ದೈಹಿಕ ಶಿಕ್ಷಣ ಮತ್ತು ಆರೋಗ್ಯ ಬೋಧಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನ ಗಮನದಲ್ಲಿಟ್ಟುಕೊಂಡು, ಗೌರವಧನ ದ್ವಿಗುಣಗೊಳಿಸುವ ಮೂಲಕ ಗೌರವಾನ್ವಿತ ಹೆಚ್ಚಳ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
2005ರ ನವೆಂಬರ್ನಲ್ಲಿ ನಮ್ಮ ಸರ್ಕಾರ ರಚನೆಯಾದಾಗಿನಿಂದ, ನಾವು ಶಿಕ್ಷಣ ವ್ಯವಸ್ಥೆಯನ್ನ ಸುಧಾರಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. 2005 ರಲ್ಲಿ ಶಿಕ್ಷಣದ ಒಟ್ಟು ಬಜೆಟ್ 4,366 ಕೋಟಿ ರೂ.ಗಳಾಗಿದ್ದು, ಈಗ ಅದು 77,690 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಹೆಚ್ಚಿನ ಸಂಖ್ಯೆಯ ಶಿಕ್ಷಕರ ನೇಮಕಾತಿ, ಹೊಸ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆ ಕಂಡುಬಂದಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಶಿಕ್ಷಣ ಇಲಾಖೆ ಅಡಿಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯಲ್ಲಿ ಕೆಲಸ ಮಾಡುವ ಅಡುಗೆಯವರ ಗೌರವಧನವನ್ನ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ. ಬಿಸಿಯೂಟ ತಯಾರಕರ ಗೌರವಧನವನ್ನ 1,650 ರೂ.ಗಳಿಂದ 3,300 ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ ಮಾಧ್ಯಮಿಕ/ಉನ್ನತ ಶಿಕ್ಷಣ ಶಾಲೆಯಲ್ಲಿ ಕೆಲಸ ಮಾಡುವ ರಾತ್ರಿ ಕಾವಲುಗಾರರ ಗೌರವಧನವನ್ನ 5,000 ರಿಂದ 10,000 ರೂ.ಗಳಿಗೆ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೇ, ದೈಹಿಕ ಶಿಕ್ಷಣ ಮತ್ತು ಆರೋಗ್ಯ ಬೋಧಕರ ಗೌರವಧನವನ್ನ 8 ಸಾವಿರದಿಂದ 16,000 ರೂ. ಗಳಿಗೆ, ವಾರ್ಷಿಕ ವೇತನವನ್ನ 200 ರೂ.ಗಳಿಂದ 400 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದು ಕಾರ್ಯನಿರತ ಸಿಬ್ಬಂದಿ ಮನೋಸ್ಥೈರ್ಯವನ್ನ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.