ಬೆಂಗಳೂರು, ಜು. 30 (DaijiworldNews/AA): ಇನ್ನೇನು ಸಿಎಂ ಬದಲಾವಣೆ ನಿಶ್ಚಿತ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿದ್ದು, ಸಿಎಂ ಕುರ್ಚಿ ಬಿಡಲಿಲ್ಲ ಅಂದರೆ ದೀಪಾಳಿ ಧಮಾಕಾ ಫಿಕ್ಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಡಿಸಿಎಂ ನಡುವೆ ವ್ಯತ್ಯಾಸ ನೋಡ್ತಿದ್ದೇವೆ. ಮೈಸೂರಿನ ಸಾಧನಾ ಸಮಾವೇಶದಲ್ಲಿ ಶಿವಕುಮಾರ್ ಏಕಾಂಗಿ ನಡೆದು ಬಂದು ರಾತ್ರೋ ರಾತ್ರಿ ದೆಹಲಿಗೆ ಹೋದ್ರು. ಈ ವೇಳೆ ಸಿಎಂ ವಿಚಲಿತರಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಇದೀಗ ಸರಣಿ ಸಭೆಗಳನ್ನು ನಡೆಸುವ ಮೂಲಕ ಪ್ರಯತ್ನ ಮಾಡ್ತಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಸಿಎಂ ಡಿಸಿಎಂ ನಡುವೆ ಕುರ್ಚಿ ಕಾಳಗ ನಡೆಯುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಂತರೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಯುದ್ದ ನಿಲೋದಿಲ್ಲ. ರಾಜ್ಯದ ಜನರಿಗೆ ದೀಪಾಳಿಯ ಧಮಾಕ ಫಿಕ್ಸ್" ಎಂದು ವಾಗ್ದಾಳಿ ನಡೆಸಿದರು.
"ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಕಷ್ಟು ಪ್ರಯತ್ನಿಸಿದರೂ ಸತತ ಸೋಲಿನ ಹತಾಶೆಯಿಂದ ರಾಹುಲ್ ಗಾಂಧಿ ಅವರು ಈಗ ಹೊಸತೊಂದು ಕಪಟ ನಾಟಕವನ್ನು ಕರ್ನಾಟಕದಲ್ಲಿ ಬಂದು ಮಾಡಲು ಹೊರಟಿದ್ದಾರೆ. ಇದರಿಂದ ಅವರೇನೂ ಸಾಧನೆ ಮಾಡಲು ಸಾಧ್ಯವಿಲ್ಲ. ಚುನಾವಣಾ ಆಯೋಗವನ್ನು ಬಿಜೆಪಿ ದುರ್ಬಳಕೆ ಮಾಡಿದ್ದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ" ಎಂದು ಅವರು ತಿಳಿಸಿದ್ದಾರೆ.