ನವದೆಹಲಿ, ಜು. 27 (DaijiworldNews/AA): ಆಕ್ಸಿಯಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಂತರಿಕ್ಷ ಯಾನ ಕೈಗೊಂಡು ಯಶಸ್ವಿಯಾಗಿ ಭೂಮಿಗೆ ಮರಳಿದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾರನ್ನು ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ.

'ಮನ್ ಕಿ ಬಾತ್ನ 124ನೇ ಸಂಚಿಕೆಯಲ್ಲಿ ಚಂದ್ರಯಾನ-3, ವಿಜ್ಞಾನ ಮತ್ತು ಸಂಸ್ಕೃತಿ ಸೇರಿದಂತೆ ಪ್ರಮುಖ ವಿಷಯಗಳನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
"ನಾವು ಯಶಸ್ಸು, ಸಾಧನೆಯ ಬಗ್ಗೆ ಮಾತನಾಡುತ್ತೇವೆ. ಕಳೆದ ಕೆಲವು ವಾರಗಳಲ್ಲಿ ವಿಜ್ಞಾನ, ಸಂಸ್ಕೃತಿಯಲ್ಲಿ ಸ್ಮರಣೀಯ ಕಾರ್ಯಗಳು ನಡೆದಿವೆ. ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶದಿಂದ ಹಿಂತಿರುಗಿದರು. ಚಂದ್ರಯಾನ 3 ಯಶಸ್ವಿಯಾಯಿತು. ಬಾಹ್ಯಾಕಾಶ ನವೋದ್ಯಮಗಳು ಹೆಚ್ಚುತ್ತಿವೆ. ಆ.23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿದೆ. ನೀವು ನಮೋ ಅಪ್ಲಿಕೇಶನ್ನಲ್ಲಿ ಸಲಹೆಗಳನ್ನು ಕಳುಹಿಸಬೇಕು" ಎಂದು ಕರೆ ನೀಡಿದರು.
"1908 ರಲ್ಲಿ ಮುಜಫರ್ಪುರದಲ್ಲಿ ಒಬ್ಬ ಯುವಕನನ್ನು ಗಲ್ಲಿಗೇರಿಸಬೇಕಾಗಿತ್ತು. ಅವನು ಭಯದಿಂದಿರಲಿಲ್ಲ, ಅವನ ಮುಖದಲ್ಲಿ ಆತ್ಮವಿಶ್ವಾಸ ತುಂಬಿತ್ತು. ಆತನೇ ಖುದಿರಾಮ್ ಬೋಸ್. ೧೮ ನೇ ವಯಸ್ಸಿನಲ್ಲಿ ಆತ ದೇಶವನ್ನೇ ನಡುಗಿಸಿದ್ದ. ಅಂತಹ ಅನೇಕ ತ್ಯಾಗಗಳ ನಂತರ, ನಮಗೆ ಸ್ವಾತಂತ್ರ್ಯ ಸಿಕ್ಕಿತು. ಆಗಸ್ಟ್ ತಿಂಗಳು ಕ್ರಾಂತಿಯ ತಿಂಗಳು. ಆ.15 ರಂದು, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತೇವೆ" ಎಂದರು.