ಅಮರಾವತಿ, ಜು. 26 (DaijiworldNews/AA): "ನಿವೃತ್ತಿ ನಂತರ ಸರ್ಕಾರದ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಸಮಾಲೋಚನೆ ಮತ್ತು ಮಧ್ಯಸ್ಥಿಕೆಯ ವೃತ್ತಿಯಲ್ಲಿ ಮುಂದುವರಿಯುತ್ತೇನೆ" ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸ್ಥಾಪಿಸಲಾಗಿರುವ ದಿ. ಟಿ.ಆರ್. ಗಿಲ್ಡಾ ಸ್ಮಾರಕ ಇ-ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, "ನವೆಂಬರ್ 23ರಂದು ನಾನು ನಿವೃತ್ತನಾಗುತ್ತಿದ್ದೇನೆ. ನಂತರದಲ್ಲಿ ಯಾವುದೇ ಸರ್ಕಾರದ ಹುದ್ದೆಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಈ ಹಿಂದೆಯೂ ಹೇಳಿದ್ದೆ" ಎಂದು ಹೇಳಿದರು.
ಅಮರಾವತಿಯ ದಾರಾಪುರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಬಿಹಾರ ಮತ್ತು ಕೇರಳದ ರಾಜ್ಯಪಾಲರಾಗಿದ್ದ ತಮ್ಮ ತಂದೆ ಆರ್.ಎಸ್. ಗವಾಯಿ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ತಮ್ಮ ಗ್ರಾಮದಲ್ಲಿ ನಡೆದ ತಂದೆಯವರ ಪುಣ್ಯತಿಥಿ ಕಾರ್ಯಕ್ರಮಕ್ಕೆ ಅವರು ಕುಟುಂಬ ಸದಸ್ಯರೊಂದಿಗೆ ಭಾಗವಹಿಸಿದ್ದರು.