ಬೆಂಗಳೂರು, ಜು. 16 (DaijiworldNews/AA): ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ, ಸೇವೆ ಹಾಗೂ ರಾಜಕೀಯ ವಲಯದಲ್ಲಿ ಶೇಕಡಾ 50 ರಷ್ಟು ಮೀಸಲಾತಿ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಸಮಿತಿ ಮಂಡಳಿ ಸಭೆಯಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಬಗ್ಗೆ ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಜಾತಿಗಣತಿ ವಿಚಾರಗಳ ಬಗ್ಗೆ ಮೂರು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿ ಕೈಗೊಂಡ ಮೂರು ನಿರ್ಣಯಗಳನ್ನು ತಿಳಿಸಿದ್ದಾರೆ.
*ರಾಷ್ಟ್ರದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಸ್ಥಿತಿ ಬಗ್ಗೆ ಸಂಪೂರ್ಣ ಗಣತಿ ಆಗಬೇಕು.
*ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ, ಸೇವೆ ಹಾಗೂ ರಾಜಕೀಯ ವಲಯದಲ್ಲಿ ಶೇಕಡಾ 50 ರಷ್ಟು ಮೀಸಲಾತಿ ನೀಡಬೇಕು.
*ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್ಟಿಕಲ್ 15(5) ಪ್ರಕಾರ ಮೀಸಲಾತಿ ನೀಡಬೇಕು.
ಹಿಂದುಳಿದ ವರ್ಗಗದವರ ಅಭಿವೃದ್ಧಿ ನಮ್ಮ ಉದ್ದೇಶವಾಗಿದ್ದು, ಸಾಮಾಜಿಕ ನ್ಯಾಯ ಕೊಡುವುದು ಮುಖ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಡುತ್ತಿದ್ದೇವೆ. ಸಂವಿಧಾನ ಉದ್ದೇಶದಂತೆ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕು. ನ್ಯಾಯ ಯೋಧ ಅಡಿಯಲ್ಲಿ ಕಾಂಗ್ರೆಸ್ ಪಕ್ಷವು ಮುನ್ನಡೆಯುತ್ತಿದೆ. ಶಿಕ್ಷಣ, ಆರ್ಥಿಕ, ಸಾಮಾಜಿಕ ಅಂಶದ ಮೇಲೆ ಜಾತಿಗಣತಿ ನಡೆಯಬೇಕು ಎಂದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಡೆಸುವಂತೆ 2015ರಲ್ಲಿ ನಮ್ಮ ಸರ್ಕಾರ ಹಿಂದುಳಿದ ಆಯೋಗಕ್ಕೆ ಆದೇಶ ನೀಡಿತ್ತು. 2018ರಲ್ಲಿ ಆಯೋಗ ಸಮೀಕ್ಷೆ ಪೂರ್ಣಗೊಳಿಸಿತು. ಆದರೆ, ಆಗ ನಮ್ಮ ಸರ್ಕಾರ ಇರಲಿಲ್ಲ. ಹೆಚ್ಡಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ಈ ವೇಳೆ ಸಮೀಕ್ಷಾ ವರದಿ ಸಲ್ಲಿಸಲು ಕಾಂತರಾಜ್ ಅವರು ಕುಮಾರಸ್ವಾಮಿ ಅವರಿಗೆ ಸಮಯ ಕೇಳಿದರು. ಆದರೆ ಕುಮಾರಸ್ವಾಮಿ ಅವರು ಸಮಯ ನೀಡಲಿಲ್ಲ. ನಂತರ, ಬಿಜೆಪಿ ಸರ್ಕಾರ ಬಂತು, ಅವರೂ ವರದಿ ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು.
ಇದೀಗ 10 ವರ್ಷದ ಹಳೇಯ ಸಮೀಕ್ಷಾ ವರದಿ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಮತ್ತೆ ಸಮೀಕ್ಷೆಗೆ ಸೂಚನೆ ನೀಡಿದ್ದೇವೆ. 3 ತಿಂಗಳ ಒಳಗೆ ಸಮೀಕ್ಷೆ ಪೂರ್ಣಗೊಳ್ಳುತ್ತದೆ. ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗಗಳ ಹಿತಾಸಕ್ತಿ ಪರ ಇದ್ದಾರೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಮ್ಮ ಪಕ್ಷದ ಉದ್ದೇಶವಾಗಿದೆ. ಒಬಿಸಿಗಳಿಗೆ ಸಾಮಾಜಿಕ ನ್ಯಾಯ ಕೊಡುವುದು ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.