ಬೆಂಗಳೂರು,ಜು. 13 (DaijiworldNews/AK): ಈ ಸೇತುವೆ ಮತ್ತು ರಸ್ತೆಯನ್ನು ಸಿಗಂಧೂರು ಚೌಡೇಶ್ವರಿ ಮಾತೆಗೆ ಸಮರ್ಪಿಸುವುದಾಗಿ ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದರು.

ಅಂಬಲಗೋಡು- ಕಳಸವಳ್ಳಿ- ಸಿಗಂಧೂರು ಸೇತುವೆಯನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ 2 ಸಾವಿರ ಕೋಟಿಗೂ ಹೆಚ್ಚು ಮೂಲಸೌಕರ್ಯ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಯನ್ನು ಅವರು ನೆರವೇರಿಸಿದರು. ಇದೊಂದು ಐತಿಹಾಸಿಕ ಸೇತುವೆ. ಮಾತೆ ಸಿಗಂಧೂರು ಚೌಡೇಶ್ವರಿ ದೇವಿ ಸೇತುವೆ ಎಂದು ಇದರ ಹೆಸರನ್ನು ಪ್ರಕಟಿಸಿದರು.
ಕರ್ನಾಟಕದ ವಿಕಾಸಕ್ಕೆ ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಕೋಟಿಯ ಕೆಲಸಗಳನ್ನು ಮಾಡಲಾಗುವುದು ಎಂದು ಅವರು ಪ್ರಕಟಿಸಿದರು. 10 ಸಾವಿರ ಕೋಟಿ ಮೊತ್ತದ ಬೆಳಗಾವಿ- ಹುನಗುಂದ- ರಾಯಚೂರು ಚತುಷ್ಪಥ ಕಾಮಗಾರಿ ತ್ವರಿತಗೊಳಿಸಲಾಗುವುದು ಎಂದು ತಿಳಿಸಿದರು. ದೇಶದ ವಿವಿಧೆಡೆ ಆಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಅವರು ಮಾಹಿತಿ ಕೊಟ್ಟರು. ದೆಹಲಿ- ಬೆಂಗಳೂರು ನಡುವಿನ ಅಂತರ ಕಡಿಮೆ ಮಾಡುವ ರಸ್ತೆ ಕುರಿತು ಅವರು ವಿವರ ನೀಡಿದರು. ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ಹೈವೇ ಈಗಾಗಲೇ ಪೂರ್ಣಗೊಂಡಿದೆ ಎಂದರು.
ಬೆಂಗಳೂರು ವರ್ತುಲ ರಸ್ತೆಯನ್ನು 15 ಸಾವಿರ ಕೋಟಿಯಲ್ಲಿ ನಿರ್ಮಾಣ ಮಾಡಲಾಗುವುದು. ಶೇ 40 ರಷ್ಟು ಕಾಮಗಾರಿ ಮುಗಿದಿದೆ. ಇದು ಶೀಘ್ರ ಪೂರ್ಣವಾಗಲಿದ್ದು, ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ವಿವರಿಸಿದರು. ಬೆಂಗಳೂರು- ಮಂಗಳೂರು ರಸ್ತೆ ಅಭಿವೃದ್ಧಿ ಸೇರಿ ವಿವಿಧ ನೂತನ ಯೋಜನೆಗಳ ಕುರಿತು ಅವರು ಪ್ರಕಟಿಸಿದರು.ಶಿವಮೊಗ್ಗ- ಮಂಗಳೂರು ಚತುಷ್ಪಥದ ಡಿಪಿಆರ್ ಮಾಡಲಾಗುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಈ ಭಾಗದ ಬಹುವರ್ಷಗಳ ಕನಸು ಇಂದು ನನಸಾಗಿದೆ ಎಂದು ಸಂತಸ ಸೂಚಿಸಿದರು. ಇಡೀ ದೇಶಕ್ಕೆ ಇದು ಪ್ರಗತಿಯ ಮೈಲಿಗಲ್ಲು ಎಂದು ವಿವರಿಸಿದರು. ಇದು ಜನರ ವಿಶ್ವಾಸ- ಜನಪ್ರತಿನಿಧಿಗಳ ಪರಿಶ್ರಮದ ಪ್ರತಿಫಲ ಎಂದರು. ಆಗುಂಬೆ ಘಾಟ್ನಲ್ಲಿ ಸುರಂಗ ಮಾರ್ಗ ನಿರ್ಮಾಣ, ಶಿವಮೊಗ್ಗ ಬೈಪಾಸ್ ವರ್ತುಲ ರಸ್ತೆ ಸೇರಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅವರು ಮನವಿ ಮಾಡಿದರು.