ನವದೆಹಲಿ, ಜು. 14 (DaijiworldNews/AK):ಜುಲೈ 16ರಂದು ಯೆಮೆನ್ನಲ್ಲಿ ಗಲ್ಲು ಶಿಕ್ಷೆ ನಿಗದಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ತಡೆಯಲು ಸೀಮಿತ ಆಯ್ಕೆಗಳಿವೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಇನ್ನೆರಡೇ ದಿನಗಳಲ್ಲಿ ನಿಮಿಷಾ ಪ್ರಿಯಾ ಅವರನ್ನು ಗಲ್ಲಿಗೇರಿಸಲಾಗುತ್ತದೆ ಎಂಬ ಕಾರಣಕ್ಕೆ ಈ ಕುರಿತಾದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಈ ವಿಷಯದಲ್ಲಿ ಭಾರತವು ಏನೆಲ್ಲ ಪ್ರಯತ್ನಿಸಬಹುದೋ ಈಗಾಗಲೇ ಆ ಎಲ್ಲ ಮಿತಿಯನ್ನು ತಲುಪಿದೆ ಎಂದು ಹೇಳಿದ್ದಾರೆ. ಭಾರತ ಸರ್ಕಾರವು ಹೆಚ್ಚಿನದನ್ನು ಇನ್ನೇನೂ ಮಾಡಲು ಸಾಧ್ಯವಿಲ್ಲ. ನಿಮಿಷಾ ಅವರನ್ನು ಉಳಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಿಸಿದೆ. ಇನ್ನೂ ಪ್ರಯತ್ನ ನಡೆಯುತ್ತಿದೆ ಎಂದು ವೆಂಕಟರಮಣಿ ಹೇಳಿದ್ದಾರೆ.
ಸದ್ಯಕ್ಕೆ ನಿಮಿಷಾ ಅವರ ಗಲ್ಲು ಶಿಕ್ಷೆಯನ್ನು ತಡೆಯಲು ಉಳಿದಿರುವ ಏಕೈಕ ಮಾರ್ಗವೆಂದರೆ’ ಬ್ಲಡ್ ಮನಿ” ಮೃತರ ಕುಟುಂಬಕ್ಕೆ ಅವರು ಕೇಳಿದಷ್ಟು ಆರ್ಥಿಕ ಸಹಾಯ ನೀಡುವುದು ಮಾತ್ರ. ಆದರೆ, ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಇದು ನಿಮಿಷಾ ಅವರ ಕುಟುಂಬದ ಖಾಸಗಿ ವಿಷಯ. ಶೆರಿಯಾ ಕಾನೂನಿನಡಿ ಇದಕ್ಕೆ ಅವಕಾಶವಿದೆ. ಆದರೆ, ಇದಕ್ಕೆ ನಿಮಿಷಾ ಅವರ ಕುಟುಂಬ ಒಪ್ಪಬೇಕಷ್ಟೆ” ಎಂದು ವಕೀಲರು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ನಿಮಿಷಾ ಪ್ರಿಯಾ ಅವರ ವಕೀಲರು ಮತ್ತು ಅಟಾರ್ನಿ ಜನರಲ್ ಇಬ್ಬರಿಂದಲೂ ವಾದಗಳನ್ನು ಕೇಳಿದ ನಂತರ ಸುಪ್ರೀಂ ಕೋರ್ಟ್ ಜುಲೈ 18ರ ಶುಕ್ರವಾರದಂದು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿತು. ಒಂದು ವೇಳೆ ಜುಲೈ 16ಕ್ಕೆ ನಿಮಿಷಾ ಪ್ರಿಯಾ ಅವರನ್ನು ನೇಣಿಗೇರಿಸುವುದು ನಿಜವಾದರೆ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆ ವೇಳೆ ಆಕೆ ಬದುಕಿಯೇ ಇರುವುದಿಲ್ಲ.
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ತನ್ನ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಯೆಮೆನ್ಗೆ ತೆರಳಿದರು. ಯೆಮೆನ್ನಲ್ಲಿ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಲು ಸಹಾಯ ಮಾಡುವುದಾಗಿ ತಲಾಲ್ 2014ರಲ್ಲಿ ಭರವಸೆ ನೀಡಿದಾಗ ಆಕೆ ತಲಾಲ್ ಅಬ್ದೋ ಮಹ್ದಿ ಅವರ ಜೊತೆ ಒಡನಾಟ ಬೆಳೆಸಿಕೊಂಡರು.
ಯೆಮೆನ್ ವ್ಯವಹಾರ ಕಾನೂನಿನ ಪ್ರಕಾರ ಅಲ್ಲಿ ಬ್ಯುಸಿನೆಸ್ ಪ್ರಾರಂಭಿಸಲು ವಿದೇಶಿಯೊಬ್ಬ ಸ್ಥಳೀಯರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ, ನಿಮಿಷಾ ತಲಾಲ್ ಜೊತೆ 2015ರಲ್ಲಿ ಸನಾದಲ್ಲಿ ತನ್ನ ಕ್ಲಿನಿಕ್ ಪ್ರಾರಂಭಿಸಿದರು. ಸ್ವಲ್ಪ ದಿನದಲ್ಲೇ ಅವರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು.
ಆಕೆ ಯೆಮೆನ್ ಬಿಟ್ಟು ಹೋಗದಂತೆ ನೋಡಿಕೊಳ್ಳಲು ತಲಾಲ್ ನಿಮಿಷಾರ ಪಾಸ್ಪೋರ್ಟ್ ಅನ್ನು ಸಹ ತೆಗೆದುಕೊಂಡಿದ್ದ ಎನ್ನಲಾಗಿದೆ. ಆತನಿಂದ ನಿಮಿಷಾ ತನ್ನ ಪಾಸ್ಪೋರ್ಟ್ ಮರಳಿ ಪಡೆದು ಭಾರತಕ್ಕೆ ಹಿಂತಿರುಗಲು ಅವನಿಗೆ ಅಮಲಿನ ಡ್ರಗ್ ಚುಚ್ಚಿದಳು. ಆದರೆ, ಅದು ಓವರ್ ಡೋಸ್ ಆಗಿ ಆತ ಸಾವನ್ನಪ್ಪಿದನು. ಇದರಿಂದ ಆಕೆಯನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು.