ಬೆಂಗಳೂರು, ಜು. 13 (DaijiworldNews/AK):ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಸಂಬಂಧ ಹಳಸಿಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮೊನ್ನೆ ದೆಹಲಿಯಲ್ಲಿದ್ದರು. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಥವಾ ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಸಿಗದೇ ವಾಪಸ್ ಕರ್ನಾಟಕಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಧ್ಯೆ ಸಂಬಂಧಗಳು ಹಳಸಿಹೋಗಿದೆ ಎಂಬುದೇ ಇದರ ಅರ್ಥ ಎಂದು ನುಡಿದರು.
ರಾಜ್ಯ ಸರಕಾರದ ಮೇಲೆ ಒಂದು ರೀತಿ ಮೋಡ ಕವಿದ ವಾತಾವರಣವಿದೆ. ಯಾವತ್ತು ಗುಡುಗು, ಸಿಡಿಲಿನ ಮಳೆ ಪ್ರಾರಂಭವಾಗುತ್ತದೋ ಕಾದು ನೋಡಬೇಕಿದೆ. ಕಾಂಗ್ರೆಸ್ ಪಕ್ಷ ಮತ್ತು ಸರಕಾರದಲ್ಲಿ ಎಲ್ಲವೂ ಕೂಡ ಸರಿಯಿಲ್ಲ ಎಂಬುದಂತೂ ಸತ್ಯ. ಮುಖ್ಯಮಂತ್ರಿಗಳು- ಉಪ ಮುಖ್ಯಮಂತ್ರಿಗಳ ಹಗ್ಗಜಗ್ಗಾಟ ಮತ್ತು ಕುರ್ಚಿಗಾಗಿ ಪೈಪೋಟಿ ನಡೆದಿದೆ. ಯಾರು ಮುಖ್ಯಮಂತ್ರಿ? ಇವರೇ ಇರುತ್ತಾರೋ, ಬದಲಾವಣೆ ಆಗುತ್ತಾರೋ ಎಂಬುದರಿಂದ ಜನರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಸಿಗದೇ ವಾಪಸ್ ಆಗಿರುವುದು ಒಳ್ಳೆಯ ಸಂಕೇತವಲ್ಲ; ಏನೇನು ಬೆಳವಣಿಗೆ ಆಗುತ್ತದೋ ಕಾದುನೋಡೋಣ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ- ಸರಕಾರದಲ್ಲಿ ಸುನಾಮಿ ಬರುವ ಭೀತಿ ಇದೆ. ಅದಕ್ಕಾಗಿ ಬೇರೆ ಬೇರೆ ಹೇಳಿಕೆ ಕೊಟ್ಟು ವಿಚಾರಗಳನ್ನು ಬದಲಿಸುವ ಪ್ರಯತ್ನ- ಕುತಂತ್ರ ನಡೆಯುತ್ತಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದುಬಿದ್ದಿದೆ. ಮುಖ್ಯಮಂತ್ರಿ ಹಾಗೂ ಶಾಸಕರ ಮಧ್ಯೆ ಯಾರು ಸಿಎಂ ಆಗಬೇಕೆಂಬ ವಿಷಯದಲ್ಲಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ರಾಜ್ಯದ ಜನರು ಪರದಾಡುತ್ತಿದ್ದಾರೆ ಎಂದು ಅವರು ಹೇಳಿದರು.