ಕಾರವಾರ, ಜು. 12 (DaijiworldNews/AA): ಗೋಕರ್ಣದಲ್ಲಿ ರಷ್ಯನ್ ಮಹಿಳೆಯೋರ್ವಳು ತನ್ನಿಬ್ಬರು ಮಕ್ಕಳೊಂದಿಗೆ ಗುಹೆಯಲ್ಲಿ ವಾಸಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಇದೀಗ ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಪ್ರಾಕೃತಿಕ ಸೊಬಗು, ಧಾರ್ಮಿಕ ಒಲವಿನಿಂದ ಗೋಕರ್ಣದ ರಾಮತೀರ್ಥದ ದಟ್ಟ ಕಾಡಿನ ನಡುವೆ ರಷ್ಯಾ ಮೂಲದ ಮಹಿಳೆ ನಿನಾ ಕುಟಿನಾ (40) ತನ್ನ ಇಬ್ಬರು ಮಕ್ಕಳಾದ ಪ್ರೆಮಾ(6) ಹಾಗೂ ಅಮಾ (4) ಜೊತೆಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರವಾಸಿಗರ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಆಗಾಗ ಗೋಕರ್ಣದ ಹಲವು ಭಾಗಗಳಲ್ಲಿ ಗಸ್ತು ತಿರುಗುತ್ತದೆ. ಈ ವೇಳೆಯಲ್ಲಿ ಗುಡ್ಡದ ತುದಿಯಲ್ಲಿ ಯಾರೋ ಅಪರಿಚಿತರು ವಾಸವಿದ್ದಂತೆ ಕಂಡುಬಂದಿದೆ. ತಕ್ಷಣ ಸ್ಥಳಕ್ಕೆ ತೆರಳಿದ ಗೋಕರ್ಣ ಸಿಪಿಐ ಶ್ರೀಧರ್ ಎಸ್ಆರ್ ನೇತೃತ್ವದ ತಂಡ ವಿದೇಶಿ ಮಹಿಳೆ ಹಾಗೂ ಅವರ ಇಬ್ಬರ ಮಕ್ಕಳನ್ನು ರಕ್ಷಿಸಿದೆ.
ಈ ಕುರಿತು ಮಹಿಳೆಯನ್ನು ವಿಚಾರಿಸಿದಾಗ ಯಾವ ಮಾಹಿತಿಯನ್ನು ಹಂಚಿಕೊಂಡಿಲ್ಲ. ಗುಹೆಯಲ್ಲಿ ಪರಿಶೀಲಿಸಿದಾಗ ಆಕೆಯ ಪಾಸ್ಪೋರ್ಟ್ ಹಾಗೂ ವೀಸಾಗಳು ದೊರೆತಿರಲಿಲ್ಲ. ತಾನು ಗುಹೆಯಿಂದ ಹೊರಬರುವುದಿಲ್ಲ ಎಂದು ವಿದೇಶಿ ಮಹಿಳೆ ಪಟ್ಟು ಹಿಡಿದಿದ್ದಳು. ಸತತ ಒಂದೂವರೆ ಗಂಟೆಗಳ ಕಾಲ ಮನವೊಲಿಸಿ ಮಹಿಳೆ ಮತ್ತು ಮಕ್ಕಳನ್ನು ಪೊಲೀಸರು ಪಟ್ಟಣಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಇನ್ನು ಆಕೆಯ ಹಿನ್ನೆಲೆ ತಿಳಿಯಲು ಪಾಸ್ಪೋರ್ಟ್ ಹಾಗೂ ವೀಸಾ ಬಗ್ಗೆ ಪೊಲಿಸರು ವಿಚಾರಿಸಿದಾಗ ಅರಣ್ಯ ಪ್ರದೇಶದಲ್ಲಿ ಕಳೆದುಹೋಗಿದೆ ಎಂದು ವಿದೇಶಿ ಮಹಿಳೆ ತಿಳಿದಿದ್ದಾಳೆ. ಸತತ ಒಂದು ದಿನಗಳ ನಿರಂತರ ಕುಂಬಿಂಗ್ ಕಾರ್ಯಾಚರಣೆಯ ಮೂಲಕ ದಟ್ಟ ಅಡವಿಯಲ್ಲಿ ಎಸೆದಿದ್ದ ಪಾಸ್ಪೋರ್ಟ್ ಹಾಗೂ ವಿಸಾವನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಅದಾದ ಬಳಿಕ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಈ ಕುರಿತು ವಿದೇಶಿ ಮಹಿಳೆಯನ್ನು ವಿಚಾರಿಸಿದಾಗ ದೇವರ ಪೂಜೆ, ಧ್ಯಾನದಿಂದ ಪ್ರೇರೇಪಿತರಾಗಿದ್ದೆ, ಆದ್ದರಿಂದ ಗೋವಾದಿಂದ ಮಕ್ಕಳೊಂದಿಗೆ ಗೋಕರ್ಣಕ್ಕೆ ಬಂದು ಗುಡ್ಡದ ಮೇಲಿರುವ ಗುಹೆಯಲ್ಲಿ ಉಳಿದುಕೊಂಡು ಧ್ಯಾನ ಹಾಗೂ ದೇವರ ಪೂಜೆ ಮಾಡಿಕೊಂಡಿದ್ದೆ. ಭಾರತದಲ್ಲಿಯೇ ನೆಲೆಸುವ ಉದ್ದೇಶದಿಂದ ತನ್ನ ಹಾಗೂ ಮಕ್ಕಳ ಪಾಸ್ಪೋರ್ಟ್, ವಿಸಾಗಳ ಮಾಹಿತಿಯನ್ನು ಪೊಲೀಸರಿಗೆ ನೀಡಿರಲಿಲ್ಲ ಎಂದು ತಿಳಿಸಿದ್ದಾಳೆ.
ರಷ್ಯಾದ ಮಹಿಳೆ ನೆಲೆಸಿರುವ ಗುಹೆ ಇರುವ ರಾಮತೀರ್ಥ ಗುಡ್ಡವು ಕುಸಿತದ ಆತಂಕದಲ್ಲಿದ್ದು, ಅಪಾಯಕಾರಿ ವಿಷ ಜಂತುಗಳನ್ನು ಹೊಂದಿರುವ ಸ್ಥಳವಾಗಿದೆ. ಈ ಹಿನ್ನೆಲೆ ಅಲ್ಲಿನ ವಾಸದ ಅಪಾಯಗಳ ಬಗ್ಗೆ ವಿದೇಶಿ ಮಹಿಳೆಗೆ ತಿಳಿಸಿ, ಮಕ್ಕಳೊಂದಿಗೆ ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪೊಲೀಸರು ಮನವರಿಕೆ ಮಾಡಿ ಆಶ್ರಮಕ್ಕೆ ಕರೆತರಲಾಗಿದೆ.