ಚಿಕ್ಕಮಗಳೂರು, ಜು. 12 (DaijiworldNews/AA): ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಶಾಲಿನಲ್ಲಿ ಸುತ್ತಿ ಹೊಡೆಯೋದಲ್ಲ, ಹಾಗೇ ಡೈರೆಕ್ಟಾಗಿ ಹೊಡೆದಿರೋದು ಎಂದು ಎಂಎಲ್ಸಿ ಸಿ.ಟಿ ರವಿ ಕುಟುಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಡಿಸಿಎಂ ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ ಎಂಬ ಸಿಎಂ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಅವರಿಗೆ ಶಾಸಕರ ಬೆಂಬಲವೇ ಇಲ್ಲ ಎಂದು ಹೇಳಿದ್ದಾರೆ. 136 ಶಾಸಕರು ಅವರ ಅಧ್ಯಕ್ಷತೆಯಲ್ಲೇ ಗೆದ್ದಿದ್ದು. ಇದು ಶಾಲಿನಲ್ಲಿ ಸುತ್ತಿ ಹೊಡೆಯೋದಲ್ಲ, ಹಾಗೇ ಡೈರೆಕ್ಟಾಗಿ ಹೊಡೆದಿರೋದು ಎಂದು ಕುಟುಕಿದ್ದಾರೆ.
ಈ ರೀತಿ ಅವಮಾನ ಮಾಡಿಸಿಕೊಂಡು ಡಿಕೆಶಿ ಹೇಗೆ ಸುಮ್ಮನೆ ಇರುತ್ತಾರೆ. ಶಾಲಿನಲ್ಲಿ ಸುತ್ತಿ ಹೊಡುದ್ರೆ ಶಾಲು ಅಂತ ಹೇಳ್ಬೋದು, ಇದು ಹಾಗಲ್ಲ, ಡೈರೆಕ್ಟ್. ಇದನ್ನು ಡಿ.ಕೆ ಶಿವಕುಮಾರ್ ಸಹಿಸಿಕೊಂಡರೆ ಅವರ ವ್ಯಕ್ತಿತ್ವಕ್ಕೆ ಅಪಚಾರ ಎಂದು ಹೇಳಿಕೊಂಡಿದ್ದಾರೆ ಎಂದರು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಸಿದ್ದರಾಮಯ್ಯ ಅವರು, 'ಮುಂದಿನ 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಸಿಎಂ ಸ್ಥಾನ ಬದಲಾವಣೆ ಚರ್ಚೆ ಅನ್ನೋದು ಸುಳ್ಳು. ಡಿ.ಕೆ.ಶಿವಕುಮಾರ್ಗೆ ಹೆಚ್ಚು ಶಾಸಕರ ಬೆಂಬಲ ಇಲ್ಲ. ಇರೋ ಬೆಂಬಲಿಗರ ಸಂಖ್ಯೆ ಕಡಿಮೆ ಇದೆ. ಅವರಿಗೆ ಕೆಲವರು ಬೆಂಬಲ ನೀಡಿದ್ದಾರೆ. ಸುರ್ಜೇವಾಲಾ ಯಾರಿಗೂ ಅಧಿಕಾರ ಬದಲಾವಣೆ ಪ್ರಶ್ನೆ ಕೇಳಿಲ್ಲ. ಕೆಲವು ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ' ಎಂದು ತಿಳಿಸಿದ್ದರು.