ಮೈಸೂರು, ಜು. 08 (DaijiworldNews/TA): ಜಿಲ್ಲೆಯ ಕಬಿನಿ ಜಲಾಶಯದ ಸಮೀಪದ ಬೀದರಹಳ್ಳಿ ಗ್ರಾಮದಲ್ಲಿ ಮಾನವೀಯತೆ ಮೆರೆದ ಘಟನೆ ನಡೆದಿದೆ. 20 ಅಡಿ ಆಳದ ಹಳ್ಳಕ್ಕೆ ಬಿದ್ದ ಹಸುವನ್ನು ಸ್ಥಳೀಯರ ಸಹಕಾರ ಮತ್ತು ಕ್ರೇನ್ ನೆರವಿನೊಂದಿಗೆ ಯಶಸ್ವಿಯಾಗಿ ರಕ್ಷಿಸಲಾಗಿದೆ. ಈ ದುರ್ಘಟನೆಯು ಪ್ರಸಿದ್ಧ ಮಂಜುಮ್ಮೆಲ್ ಸಿನಿಮಾ ದೃಶ್ಯವೊಂದನ್ನು ಸ್ಮರಿಸುವಂತಿತ್ತು.

ಬೀದರಹಳ್ಳಿಯ ಶಿವಲಿಂಗ ನಾಯಕ ಎಂಬುವರಿಗೆ ಸೇರಿದ ಹಸುವನ್ನು ದಿನಾಲು ಮೇವು ಮೇಯಲು ಬಿಟ್ಟು ಬಿಡಲಾಗುತ್ತಿತ್ತು. ಆದರೆ, ಹಸು ಕಾಮಗಾರಿ ಸಲುವಾಗಿ ತೋಡಿದ್ದ ಹಳ್ಳಕ್ಕೆ ಕಾಲು ಜಾರಿ ಬಿದ್ದುಬಿಟ್ಟಿತ್ತು. ಈ ದೃಶ್ಯ ಕಂಡು ಶೀಘ್ರವೇ ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು ಒಟ್ಟಾಗಿ ಹಸುವನ್ನು ಮೇಲಕ್ಕೆ ಎತ್ತಲು ಯತ್ನಿಸಿದರು.
ಆದರೆ ಹಸು ಬಿದ್ದಿದ್ದ ಹಳ್ಳ ಆಳ ಇದ್ದ ಕಾರಣ ಪ್ರಥಮ ಯತ್ನ ವಿಫಲವಾಯಿತು. ತಕ್ಷಣವೇ ಕ್ರೇನ್ ಬಳಸಿ ಸುಮಾರು ಒಂದು ಗಂಟೆ ಕಾಲ ನಡೆದ ಸುವ್ಯವಸ್ಥಿತ ಕಾರ್ಯಾಚರಣೆಯ ನಂತರ, ಹಸುವನ್ನು 20 ಅಡಿ ಆಳದಿಂದ ಸುರಕ್ಷಿತವಾಗಿ ಮೇಲಕ್ಕೆ ಎತ್ತಲಾಯಿತು. ‘ಆಪರೇಶನ್ ಹಸು’ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನಲೆಯಲ್ಲಿ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಹಸು ಯಾವುದೇ ಭೀಕರ ಗಾಯವಿಲ್ಲದೇ ಪಾರಾಗಿದ್ದುದೇ ಎಲ್ಲರಿಗೂ ಆಶ್ಚರ್ಯ ಮೂಡಿಸಿತು. ಬದುಕಿದ ಮೂಕ ಜೀವ ನೋಡಿ ನೆರೆದವರ ಕಣ್ಣಲ್ಲಿ ಆತಂಕ, ಕಣ್ಣೀರು, ಆನಂದಬಾಷ್ಪ ಎಲ್ಲಾ ಒಟ್ಟಾಗಿ ಸುರಿಯಿತು. ಜೀವವನ್ನು ಉಳಿಸಿದೆವು ಎನ್ನುವ ನೆಮ್ಮದಿ ಕೊಟ್ಟ ಸಾರ್ಥಕ ಕಾರ್ಯಾಚರಣೆ ಇದಾಗಿತ್ತು.