ಪಾಟ್ನಾ, ಜು. 08 (DaijiworldNews/AK): ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮಹತ್ವದ ಹೆಜ್ಜೆಯಾಗಿ, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಎಲ್ಲಾ ಸರ್ಕಾರಿ ಸೇವೆಗಳು ಮತ್ತು ಹುದ್ದೆಗಳಲ್ಲಿ ಮಹಿಳೆಯರಿಗೆ 35% ಮೀಸಲಾತಿಯನ್ನು ಘೋಷಿಸಿದೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ನಾರಿ ಶಕ್ತಿ ಅಭಿಯಾನದ ಭಾಗವಾಗಿ ನಿತೀಶ್ ಕುಮಾರ್ ಈ ಘೋಷಣೆಯನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ಪಾಟ್ನಾದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಎಲ್ಲಾ ರಾಜ್ಯ ಸರಕಾರಿ ಸೇವೆಗಳು ಅಂದರೆ ಎಲ್ಲಾ ವರ್ಗದ ಮತ್ತು ಹಂತಗಳ ಹುದ್ದೆಗಳ ನೇರ ನೇಮಕಾತಿಯಲ್ಲಿ ಬಿಹಾರದ ಖಾಯಂ ನಿವಾಸಿಗಳಾದ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ 35% ಮೀಸಲಾತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಬಿಹಾರದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು, ಅವರಿಗೆ ತರಬೇತಿ ನೀಡಲು, ಸಬಲೀಕರಣಗೊಳಿಸಲು ʼಬಿಹಾರ ಯುವ ಆಯೋಗʼವನ್ನು ರಚಿಸಲು ಸರಕಾರ ನಿರ್ಧರಿಸಿದೆ. ಇದಕ್ಕೆ ಕೂಡ ಸಚಿವ ಸಂಪುಟ ಅನುಮೋದನೆ ನೀಡಿದೆ.