ಒಡಿಶಾ,ಜು. 08 (DaijiworldNews/TA): ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ ಹೆಸರಿನಲ್ಲಿ ಹುಚ್ಚಾಟ ಆಡುವ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ರೀಲ್ಸ್ಗಾಗಿ ಪ್ರಾಣವನ್ನೇ ಅಪಾಯಕ್ಕೆ ಸಿಲುಕಿಸುವ ಕೃತ್ಯಕ್ಕೆ ಯುವ ಜನರು ಮುಂದಾಗುತ್ತಿದ್ದಾರೆ. ರೀಲ್ಸ್ಗಾಗಿ ಮೂವರು ಬಾಲಕರು ಅಪಾಯಕಾರಿ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.

ಒಡಿಶಾದ ಪುರುನಪಾಣಿ ನಿಲ್ದಾಣದ ಸಮೀಪವಿರುವ ದಾಲುಪಲಿ ಪ್ರದೇಶದಲ್ಲಿ ಮೂವರು ಬಾಲಕರು ಅಪಾಯಕಾರಿ ರೀಲ್ಸ್ ಮಾಡಿದ್ದಾರೆ. ರೈಲು ಹಳಿ ಮೇಲೆ ಅತಿ ವೇಗದಲ್ಲಿ ಹಾದು ಹೋಗುವಾಗ ಬಾಲಕನೊಬ್ಬ ಅದರ ಕೆಳಗೆ ಮಲಗಿಕೊಂಡಿದ್ದಾನೆ. ಈ ಅಪಾಯಕಾರಿ ದೃಶ್ಯವನ್ನು ಬಾಲಕನ ಇಬ್ಬರು ಸ್ನೇಹಿತರು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ರೈಲು ಹೋದ ಬಳಿಕ ಮೂವರು ಬಾಲಕರು ಖುಷಿಯಿಂದ ಕುಣಿದಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ ಅಪ್ಲೋಡ್ ಮಾಡಿದ ಬಳಿಕ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ.
ಆ ಬಳಿಕ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಇಂತಹ ಅಜಾಗರೂಕ ಕೃತ್ಯಗಳು ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತವೆ ಮತ್ತು ಕಾನೂನುಗಳನ್ನು ಉಲ್ಲಂಘಿಸುತ್ತವೆ. ರೈಲು ಹಳಿಗಳ ಮೇಲೆ ಇಂತಹ ಸಾಹಸಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಕ್ಕಳ ಕ್ರಿಯೆಗಳ ಪೋಷಕರು ಗಮನ ಹರಿಸಬೇಕೆಂದು ಪೊಲೀಸರು ಹೇಳಿದ್ದಾರೆ. ರೀಲ್ ವೈರಲ್ ಆಗುತ್ತದೆ ಎನ್ನುವ ನಿಟ್ಟಿನಲ್ಲಿ ಸ್ನೇಹಿತರು ಈ ರೀತಿ ಐಡಿಯಾ ಮಾಡಿದರು ಎಂದು ಹಳಿಯ ಮೇಲೆ ಮಲಗಿದ್ದ ಬಾಲಕ ಹೇಳಿದ್ದಾನೆ. “ನಾನು ಹಳಿಗಳ ಮೇಲೆ ಮಲಗಿದೆ. ರೈಲು ಹಾದು ಹೋದಾಗ, ನನ್ನ ಹೃದಯ ಬಡಿಯುತ್ತಿತ್ತು. ನಾನು ಬದುಕುಳಿಯುತ್ತೇನೆಂದು ನಿರೀಕ್ಷಿಸಿರಲಿಲ್ಲ” ಎಂದು ಬಾಲಕ ಹೇಳಿದ್ದಾನೆ.