ನವದೆಹಲಿ, ಜು. 07 (DaijiworldNews/AA): ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪ ಎದುರಿಸುತ್ತಿರುವ ಹರಿಯಾಣ ಮೂಲದ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಕೇರಳ ಸರ್ಕಾರದ ಧನಸಹಾಯದಲ್ಲಿ ಪ್ರವಾಸ ಕೈಗೊಂಡಿದ್ದರು ಎಂದು ಹೇಳಲಾಗುತ್ತಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಯ ಮೂಲಕ ಒದಗಿಸಲಾದ ದಾಖಲೆಗಳ ಪ್ರಕಾರ, ಜನವರಿ 2024 ಮತ್ತು ಮೇ 2025ರ ನಡುವೆ ಜ್ಯೋತಿ ಮಲ್ಹೋತ್ರಾ ಕೇರಳದ ಕೊಚ್ಚಿ, ತಿರುವನಂತಪುರಂ ಮತ್ತು ಇತರ ಕೆಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ಭೇಟಿಯನ್ನು ಸಾಂಸ್ಕೃತಿಕ ಅಧ್ಯಯನ ಅಥವಾ ಸಂಶೋಧನೆಯ ಭಾಗವೆಂದು ವರ್ಗೀಕರಿಸಲಾಗಿತ್ತು. ಈ ಭೇಟಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಸರ್ಕಾರಿ ಯೋಜನೆಯಡಿ ಭರಿಸಲಾಗಿದೆ. ಆದರೆ, ಈ ಯೋಜನೆಯ ನಿಖರ ಸ್ವರೂಪ ಮತ್ತು ಜ್ಯೋತಿಯ ಚಟುವಟಿಕೆಗಳ ಕುರಿತು ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಇನ್ನೂ ವಿದೇಶಿ ಗೂಢಚರ್ಯೆ ಆರೋಪಿತ ವ್ಯಕ್ತಿಯೊಬ್ಬರು ಸರ್ಕಾರಿ ಧನಸಹಾಯದ ಮೂಲಕ ರಾಜ್ಯಕ್ಕೆ ಭೇಟಿ ನೀಡಿರುವುದು, ಗೂಢಚರ್ಯೆಗೆ ಸಂಬಂಧಿಸಿದ ಶಂಕೆಗಳನ್ನು ಹೆಚ್ಚಿಸಿದೆ. ಕೇರಳದ ಸೂಕ್ಷ್ಮ ಭೌಗೋಳಿಕ ಸ್ಥಾನ ಮತ್ತು ರಾಜಕೀಯ ವಾತಾವರಣವನ್ನು ಗಮನಿಸಿದಾಗ, ಈ ಘಟನೆ ಇನ್ನಷ್ಟು ಗಂಭೀರವಾಗಿದೆ. ಈ ಆರೋಪದ ಕುರಿತು ಸಂಪೂರ್ಣ ತನಿಖೆಗೆ ಒತ್ತಾಯಿಸಲಾಗುತ್ತಿದೆ.