ತಿರುವನಂತಪುರಂ, ಜು. 07 (DaijiworldNews/TA): ದೇಶಾದ್ಯಂತ ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಅರಣ್ಯ ಇಲಾಖೆಯಿಂದ ನೌಕರರನ್ನು ನೇಮಿಸಲಾಗುತ್ತದೆ. ಕೇರಳ ಅರಣ್ಯ ಇಲಾಖೆಯಲ್ಲಿ ಮಹಿಳಾ ಅರಣ್ಯ ಅಧಿಕಾರಿಯೊಬ್ಬರು ಅಚ್ಚರಿಯ ಕೆಲಸ ಮಾಡಿದ್ದಾರೆ. ಜನರು ಇದರ ಬಗ್ಗೆ ತಿಳಿದು ಆಶ್ಚರ್ಯಚಕಿತರಾಗಿದ್ದಾರೆ. ಮಹಿಳೆ ಕೇವಲ 6 ನಿಮಿಷಗಳಲ್ಲಿ 14-15 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ. ಇದು ಅವರು ರಕ್ಷಿಸಿದ ಮೊದಲ ಕಾಳಿಂಗ ಸರ್ಪ ಹಾವು. ಅವರು ತಮ್ಮ ಎಂಟು ವರ್ಷಗಳ ವೃತ್ತಿಜೀವನದಲ್ಲಿ ನೂರಾರು ಹಾವುಗಳನ್ನು ರಕ್ಷಿಸಿದ್ದಾರೆ.

ಬೀಟ್ ಫಾರೆಸ್ಟ್ ಆಫೀಸರ್ ಜಿ.ಎಸ್. ರೋಶ್ನಿ ಅವರು ಕೇರಳದ ಪೆಪ್ಪರ ಬಳಿಯ ಹೊಳೆಯೊಂದರಿಂದ 14-15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ ಎನ್ನಲಾಗಿದೆ. ಕೆಲವೇ ನಿಮಿಷಗಳಲ್ಲಿ ಆಕೆಯ ರಕ್ಷಣಾ ಕಾರ್ಯಾಚರಣೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೆಚ್ಚುಗೆ ಮತ್ತು ಟೀಕೆಗಳನ್ನು ಹುಟ್ಟುಹಾಕಿದೆ. ದಕ್ಷಿಣ ಕೇರಳದಲ್ಲಿ ಅಪರೂಪಕ್ಕೆ ಕಾಣುವ ಈ ಹಾವನ್ನು ಸೆರೆಹಿಡಿದ ಸ್ವಲ್ಪ ಸಮಯದ ನಂತರ ಕಾಡಿಗೆ ಬಿಡಲಾಯಿತು.
ರಕ್ಷಣಾ ಕಾರ್ಯಾಚರಣೆಯ ವೀಡಿಯೊ ಟಿವಿಯಲ್ಲಿ ವೈರಲ್ ಆಗಿದ್ದು, ಬಾಗಿದ ಕೋಲು ಮತ್ತು ಚೀಲವನ್ನು ಹಿಡಿದ ರೋಶ್ನಿ ಒಬ್ಬಂಟಿಯಾಗಿ ನಾಗರಹಾವನ್ನು ಚೀಲದೊಳಗೆ ತಳ್ಳುತ್ತಿರುವುದನ್ನು ಚಿತ್ರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯ ವೀಡಿಯೊ ವೈರಲ್ ಆದ ನಂತರ ಆಕೆಯ ಧೈರ್ಯಶಾಲಿ ಪ್ರಯತ್ನಗಳು ಆನ್ಲೈನ್ ಸಮುದಾಯದಿಂದ ಟೀಕೆ ಮತ್ತು ಪ್ರಶಂಸೆಯನ್ನು ಗಳಿಸಿದೆ. ಹಲ್ಲಿಗಳು ಮತ್ತು ಜಿರಳೆಗಳನ್ನು ನೋಡಿ ಭಯಪಡುವ ಮಹಿಳೆಯರು ತಮ್ಮಿಂದ ಕಲಿಯಬೇಕು ಎಂದು ವೀಡಿಯೊದಲ್ಲಿ ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.