ನವದೆಹಲಿ, ಜು. 07 (DaijiworldNews/AA): ಹೋಟೆಲ್ನಲ್ಲಿ ಮಾಣಿ ಆಗಿದ್ದ ವ್ಯಕ್ತಿ ತನ್ನ ತಾಳ್ಮೆ, ಛಲವನ್ನು ಬಿಡದೇ ಬರೋಬರಿ 7 ಬಾರಿ ಪರೀಕ್ಷೆ ಬರೆದು, ಕೊನೆ ಪ್ರಯತ್ನದಲ್ಲಿ ಯುಪಿಎಸ್ಸಿ ಪಾಸ್ ಮಾಡಿದ ಕೆ ಜಯಗಣೇಶ್ ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಕೆ ಜಯಗಣೇಶ್ 2008 ನೇ ಸಾಲಿನಲ್ಲಿ ಆಲ್ ಇಂಡಿಯಾ ರ್ಯಾಂಕ್ 156 ರೊಂದಿಗೆ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿ, ಐಎಎಸ್ ಅಧಿಕಾರಿಯಾದವರು. ಇವರು 6 ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಫೇಲ್ ಆದರೂ ಸಹ ಛಲ ಬಿಡದೇ 7ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪಾಸ್ ಮಾಡಿದವರು. ಆರ್ಥಿಕ ಪರಿಸ್ಥಿತಿ ತೀರ ಸಮಸ್ಯೆ ಇದ್ದ ಕಾರಣ ಹೆಚ್ಚು ಕಷ್ಟಗಳನ್ನು ಅನುಭವಿಸಿದವರು. ಇವರ ತಂದೆ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರು. ಆದರೆ ಜೀವನಾಂಶಕ್ಕೆ ಇವರ ದುಡಿಮೆ ಸಾಕಾಗುತ್ತಿರಲಿಲ್ಲ. ಇನ್ನು ಜಯಗಣೇಶ್ಗೆ ಯುಪಿಎಸ್ಸಿ ಸಿದ್ಧತೆಗೆ ಸಹಾಯ ಮಾಡಲು ಸಾಧ್ಯವೇ. ಇಂತಹ ಕಷ್ಟಗಳನ್ನು ಮೆಟ್ಟಿ ನಿಂತು ತಮ್ಮ ಯುಪಿಎಸ್ಸಿ ಜರ್ನಿಯಲ್ಲಿ ಯಶಸ್ಸು ಪಡೆದವರು.
ಯುಪಿಎಸ್ಸಿ ಪರೀಕ್ಷೆಯ ತಮ್ಮ ಕೊನೆಯ ಪ್ರಯತ್ನದಲ್ಲಿರುವಾಗಲೇ ಇಂಟೆಲಿಜೆನ್ಸ್ ಬ್ಯುರೋ ಪರೀಕ್ಷೆ ಬರೆದಿದ್ದ ಇವರು ಆ ಹುದ್ದೆಗೆ ಆಯ್ಕೆಯಾಗಿದ್ದರು. ಈ ವೇಳೆ ಅವರಿಗೆ ಈ ಹುದ್ದೆ ಆಯ್ಕೆ ಮಾಡುವುದೋ ಅಥವಾ ಕೊನೆ ಪ್ರಯತ್ನದ ಯುಪಿಎಸ್ಸಿ ಪರೀಕ್ಷೆ ಬರೆಯುವುದೋ ಎನ್ನುವ ಸಂಶಯದಲ್ಲಿದ್ದರು. ಕೊನೆಗೆ ಸಿಎಸ್ಇ ಪರೀಕ್ಷೆಯನ್ನು ಆಯ್ಕೆ ಮಾಡಿದ ಇವರು 2008 ರಲ್ಲಿ ದೇಶದ ಅತಿ ಕಠಿಣ ಪರೀಕ್ಷೆಯನ್ನು ಗೆದ್ದರು.
ಜಯಗಣೇಶ್ ತಮ್ಮ ಶಾಲಾ ಶಿಕ್ಷಣವನ್ನು ಅವರ ಗ್ರಾಮದಲ್ಲೇ ಪಡೆದವರು. ಪ್ರೌಢಶಿಕ್ಷಣದ ನಂತರ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ತಂತಿ ಪೆರಿಯಾರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದಿದರು. ಈ ಎರಡು ಡಿಗ್ರಿಗಳು ಸಹ ಅವರಿಗೆ ಸರಿಯಾದ ಜಾಬ್ ಪಡೆಯಲು ಸಮಾಧಾನ ನೀಡಿರಲಿಲ್ಲ.
ಬಿಇ ಪದವಿ ನಂತರ ಇವರು ಸಿನಿಮಾ ಥಿಯೇಟರ್ನಲ್ಲಿ ಬಿಲ್ಲಿಂಗ್ ಕ್ಲರ್ಕ್ ಹುದ್ದೆಗೆ ಸೇರಲು ನಿರ್ಧರಿಸಿದರು. ಜತೆಗೆ ಹೋಟೆಲ್ನಲ್ಲಿ ಮಾಣಿ ಆಗಿ ಕೆಲಸ ಮಾಡಲು ಆರಂಭಿಸಿದರು. ಈ ಜಾಬ್ಗಳಿಂದ ಅವರ ನಿರೀಕ್ಷೆಯ ದುಡಿಮೆ ಕಾಣಲು ಆಗಲಿಲ್ಲ. ಇಷ್ಟು ಕಡಿಮೆ ಹಣದಿಂದ ಕುಟುಂಬ ನಿರ್ವಹಣೆ ಅಸಾಧ್ಯ ಎಂದು ಅರಿತುಕೊಂಡರು. ಜತೆಗೆ ಐಎಎಸ್ ಅಧಿಕಾರಿ ಆಗುವ ಕನಸು ಕಂಡಿದ್ದರು. ಬಳಿಕ , ಕನಸಿನ ಹುದ್ದೆಯ ಕಡೆ ವರ್ಕ್ ಮಾಡಲು ಆರಂಭಿಸಿದರು. ಸತತ 6 ಬಾರಿ ಫೇಲ್ ಆದರೂ ಸಹ ಗುರಿಯ ಕಡೆ ಉತ್ಸಾಹ ಕಳೆದುಕೊಳ್ಳದೇ, 7ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದರು.