ಬೆಂಗಳೂರು, ಜೂ. 29 (DaijiworldNews/AA): "ಕಾವೇರಿ ಆರತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ನೋಟೀಸ್ಗೆ ಸರ್ಕಾರ ಕಾನೂನು ಮೂಲಕವೇ ಉತ್ತರ ನೀಡಲಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಕಾವೇರಿ ಆರತಿ ಹಿನ್ನೆಲೆಯಲ್ಲಿ ಹೈಕೋರ್ಟ್ ನೋಟೀಸ್ ಕೊಟ್ಟಿರುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪೂಜೆ, ಪ್ರಾರ್ಥನೆ ಮಾಡಲು ಯಾರೂ ಬೇಡ ಎನ್ನುವುದಿಲ್ಲ. ಕೆಲವರಿಗೆ ಆತಂಕ ಇದೆ. ಆದನ್ನು ಸರ್ಕಾರ ನಿವಾರಣೆ ಮಾಡಲಿದೆ. ಆರತಿ ಮಾಡಲು ಯಾರೂ ಅನುಮತಿ ಕೇಳುತ್ತಿಲ್ಲ. ಅಲ್ಲಿ ಪ್ರತಿನಿತ್ಯ ಆರತಿ ನಡೆಯುತ್ತಿದೆ" ಎಂದರು.
"ಅಶೋಕ್ ಅವರು ಜ್ಯೋತಿಷ್ಯ ಹೇಳಲು ಆರಂಭಿಸಿದ್ದಾರಾ? ಅವರು ಜ್ಯೋತಿಷ್ಯ ಕಲಿತಿದ್ದರೆ ನನಗೂ ಸಮಯ ಕೊಡಿಸಿ. ನಾನು ಹೋಗಿ ಭವಿಷ್ಯ ಕೇಳುತ್ತೇನೆ" ಎಂದು 'ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಬದಲಾವಣೆ ಆಗಲಿದೆ' ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದರು.