ಬೆಂಗಳೂರು, ಜೂ. 28 (DaijiworldNews/ AK): ವಿಜೃಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ, ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.
https://daijiworld.ap-south-1.linodeobjects.com/Linode/img_tv247/27-05-2025AKCM.jpg
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಡಹಬ್ಬ ಮೈಸೂರು ದಸರಾ-2025 ಆಚರಣೆ ಕುರಿತು ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಸೂಚನೆಗಳನ್ನು ನೀಡಿದರು.
ಸರ್ಕಾರದ ಸಾಧನೆಗಳು, ನಾವು ಪ್ರತೀ ಇಲಾಖೆಯಲ್ಲೂ ಜಾರಿ ಮಾಡಿರುವ ಜನಪರ ಕಾರ್ಯಕ್ರಮಗಳು ಜನರಿಗೆ ಸಮರ್ಪಕವಾಗಿ ಮನವರಿಕೆ ಆಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ಈ ಬಾರಿ ರಾಜ್ಯದಾದ್ಯಂತ ಮಳೆ ಬೆಳೆ ಉತ್ತಮವಾಗಿದ್ದು, ನದಿ, ಕೆರೆಗಳು ತುಂಬಿದ್ದು, ವೈಭವದಿಂದ ದಸರಾ ಆಚರಿಸಲಾಗುವುದು ಎಂದರು.
ಸೆಪ್ಟಂಬರ್ 22ರಂದು ದಸರಾ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ಅಕ್ಟೋಬರ್ 2ರಂದು ವಿಜಯದಶಮಿ, ಜಂಬೂ ಸವಾರಿ ನಡೆಯಲಿದೆ. ದಸರಾ ಈ ಬಾರಿ 10ದಿನಗಳ ಬದಲು 11ದಿನಗಳ ಕಾಲ ನಡೆಯಲಿದೆ.
ದಸರಾಕ್ಕೆ ತನ್ನದೇ ಆದ ಚಾರಿತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದ್ದು, ಇದಕ್ಕೆ ಪೂರಕವಾಗಿ ದಸರಾ ಆಚರಿಸಲಾಗುವುದು ಎಂದರು.
ವಿಶ್ವ ವಿಖ್ಯಾತ ದಸರಾದ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಳೆದ ವರ್ಷ ದಸರಾ ಆಚರಣೆಗೆ ಒಟ್ಟು ರೂ. 40 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆಗೆ ಬೇಕಾದಷ್ಟು ಅನುದಾನವನ್ನು ಒದಗಿಸಲಾಗುವುದು. ಸರ್ಕಾರದ ಸಾಧನೆಗಳನ್ನು ಮತ್ತು ಇಲಾಖಾ ಕಾರ್ಯಕ್ರಮಗಳನ್ನು ಸರಿಯಾಗಿ ಪ್ರತಿಬಿಂಬಿಸುವಂತಹ ವಸ್ತು ಪ್ರದರ್ಶನ, ಸ್ತಬ್ಧಚಿತ್ರ ಪ್ರದರ್ಶನ ಆಯೋಜಿಸಬೇಕು. ಅಕ್ಟೋಬರ್ 2ರಂದು ವಿಜಯದಶಮಿ ಬಂದಿರುವ ಕಾರಣ ಸ್ತಬ್ಧ ಚಿತ್ರಗಳಲ್ಲಿ ಗಾಂಧೀಜಿ ವಿಚಾರಧಾರೆಗಳಿಗೆ ಸಹ ಅವಕಾಶ ಕಲ್ಪಿಸಬೇಕು ಎಂದರು.
ಕಲ್ಯಾಣ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳ ಮಾಹಿತಿ ಒದಗಿಸಲು ವ್ಯವಸ್ಥೆ ಮಾಡಬೇಕು. ದಸರಾ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. 10ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಸಂದರ್ಭ ಇದಾಗಿದೆ. ವಿದೇಶಿಗರೂ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಾರೆ. ಯಾವುದೇ ಕಾರಣಕ್ಕೂ ಅನಾಹುತ ಸಂಭವಿಸದಂತೆ ಎಲ್ಲಾ ಕಡೆ ಮುನ್ನೆಚ್ಚರಿಕೆ ವಹಿಸಬೇಕು.
ಅರಮನೆ ಮುಂಭಾಗದಲ್ಲಿ ಆಸನದ ವ್ಯವಸ್ಥೆಯನ್ನು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮಾಡಿ ಜನದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಿ. ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.