ಬೆಂಗಳೂರು, ಜೂ. 27 (DaijiworldNews/AA): ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ನಾನಾ ಮಾರ್ಗಗಳನ್ನು ಅನುಸರಿಸುತ್ತಿದೆ. ಕೋಮು ಭಾವನೆ ಕೆರಳಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲೇ ಅವಕಾಶವಿರುವಾಗ ಹೊಸ ಕಾನೂನು ತರುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನ ಎಲ್ಲಾ ಶಾಸಕರಲ್ಲಿ ಅಸ್ಥಿರತೆ ಕಾಡುತ್ತಿದೆ. ಹೀಗಾಗಿ ಅನುದಾನದ ಕೊರತೆ ಸೇರಿದಂತೆ ವಿವಿಧ ವಿಷಯಗಳಲ್ಲಿ ರಾಜ್ಯ ಸರ್ಕಾರ ವಿರುದ್ಧ ವಿವಿಧ ಹಗರಣಗಳ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು ಸಾರ್ವಜನಿಕವಾಗಿ ಚರ್ಚೆ ನಡೆಯುವುದಿಲ್ಲ. ಸದ್ಯಕ್ಕೆ ಎಲ್ಲ ರಾಜ್ಯಗಳಲ್ಲೂ ಸಂಘಟನಾ ಪರ್ವ ನಡೆಯುತ್ತಿದೆ. ಬೂತ್ ಮಟ್ಟದಿಂದ ರಾಜ್ಯಾಧ್ಯಕ್ಷರ ಆಯ್ಕೆತನಕ ಚುನಾವಣೆ ನಡೆಯಲಿದೆ. ವರಿಷ್ಠರು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ಅನ್ಯ ಕಾರ್ಯದ ನಿಮಿತ್ತ ದೆಹಲಿಗೆ ಆಗಮಿಸಿದ್ದ ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿಸಲಾಗಿದೆ. ಈ ವಿಷಯದಲ್ಲಿ ರಾಜಕೀಯ ಹುಡುಕುವುದು ಸರಿಯಲ್ಲ ಎಂದು ತಿಳಿಸಿದರು.