ಬೆಂಗಳೂರು, ಜೂ. 25 (DaijiworldNews/AA): ಬೇಸಿಗೆ ಕಾಲದಲ್ಲಿ ಫಲ ಬಿಡುವ ನೇರಳೆ ಹಣ್ಣು ತಿನ್ನಲು ಬಹಳ ರುಚಿ ಹಾಗೂ ಇದರಲ್ಲಿ ಹಲವಾರು ಔಷಧೀಯ ಗುಣಗಳು ಕೂಡ ಇವೆ. ಇದೇ ಮೊದಲ ಬಾರಿಗೆ ಕರ್ನಾಟಕ ನೇರಳೆ ಹಣ್ಣನ್ನು ಲಂಡನ್ಗೆ ರಫ್ತು ಮಾಡಿದೆ.

ನೇರಳೆ ಹಣ್ಣನ್ನು ಜಾಮೂನ್ ಎಂದೂ ಕರೆಯುತ್ತಾರೆ. ಇದೀಗ ನೇರಳೆ ಹಣ್ಣಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ನೇರಳೆ ಹಣ್ಣನ್ನು ಲಂಡನ್ ಗೆ ಕರ್ನಾಟಕದಿಂದ ರಫ್ತು ಮಾಡಲಾಗುತ್ತದೆ.
ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕದಿಂದ ತಾಜಾ ನೇರಳೆ ಹಣ್ಣುಗಳ ರಫ್ತಿಗೆ ಚಾಲನೆ ನೀಡಿದೆ. ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಹಣ್ಣುಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್, 'ನಮ್ಮ ನೇರಳೆ ಈಗ ಜಾಗತಿಕವಾಗಿ. ಮೊಟ್ಟಮೊದಲ ಬಾರಿಗೆ, ಕರ್ನಾಟಕದ ತಾಜಾ ನೇರಳೆ ಹಣ್ಣು ಲಂಡನ್ಗೆ ರಫ್ತಾಗಿದೆ. ಇದು ನಮ್ಮ ರೈತರಿಗೆ ಮತ್ತು ರಾಜ್ಯಕ್ಕೆ ಹೆಮ್ಮೆಯ ಮೈಲಿಗಲ್ಲು' ಎಂದು ಬರೆದುಕೊಂಡಿದ್ದಾರೆ.
'ಈ ರಫ್ತು ಕೇವಲ ಒಂದು ಸಾಗಾಟಕ್ಕಿಂತ ಹೆಚ್ಚು ಮಹತ್ವವನ್ನು ಹೊಂದಿದೆ. ಇದು ಬೆಳೆಯುತ್ತಿರುವ ಭವಿಷ್ಯದ ಸಂಕೇತವಾಗಿದೆ. ಏಕೆಂದರೆ ಇದು ಕೇವಲ ಒಂದು ಹಣ್ಣಿನ ಬಗ್ಗೆ ಅಲ್ಲ. ಇದು ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಜಾಗತಿಕ ಮಾರುಕಟ್ಟೆಗಳನ್ನು ತೆರೆಯುವುದು ಮತ್ತು ಕರ್ನಾಟಕದ ಮಣ್ಣಿನ ಶ್ರೀಮಂತಿಕೆಯನ್ನು ಜಗತ್ತಿಗೆ ಪ್ರದರ್ಶಿಸುವುದಾಗಿದೆ' ಎಂದು ಪೋಸ್ಟ್ ಮಾಡಿದ್ದಾರೆ.