ಹುಬ್ಬಳಿ, ಜೂ. 22 (DaijiworldNews/AA): "ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳ ಮಾಡುತ್ತಿದ್ದೇವೆ ಅಂತಾರೆ. 2019ರಲ್ಲಿ ಕೇಂದ್ರ ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಸುತ್ತೋಲೆ ಇದ್ದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಲಿ" ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದ್ದಾರೆ.

ಇತ್ತೀಚೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಈ ಬಗ್ಗೆ ಮಾತನಾಡಿ, "ಈ ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ. 2019ರಲ್ಲಿ ಮೈತ್ರಿ ಸರ್ಕಾರದಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶೇ 15ರಷ್ಟು ಮೀಸಲಾತಿ ಬಗ್ಗೆ ಸಂಪುಟ ಉಪಸಮಿತಿ ಶಿಫಾರಸು ಮಾಡಲಾಗಿತ್ತು" ಎಂದಿದ್ದರು. ಸದ್ಯ ಜಮೀರ್ ಹೇಳಿಕೆಗೆ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಈ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, "ಈ ಬಗ್ಗೆ ನಾನು ಟ್ವೀಟ್ ಮಾಡಿದ್ದೆ, ಅದಕ್ಕೆ ಸಿಎಂ ಉತ್ತರ ಕೊಟ್ಟಿಲ್ಲ. ಕಾಂಗ್ರೆಸ್ನವರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ. ಕಾನೂನಿನ ಮೇಲೆ ಕಾಂಗ್ರೆಸ್ನವರಿಗೆ ಗೌರವವೇ ಇಲ್ಲ. ಅಧಿಕಾರಿಗಳನ್ನು ಅವರ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
ಚಕ್ರವರ್ತಿ ಸೂಲಿಬೆಲೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡಿದ ಪೊಲೀಸ್ ಅಧಿಕಾರಿ ತಲೆಯಲ್ಲಿ ಬುದ್ಧಿ ಇಲ್ಲ. ರಾಜಕೀಯ ಮಾತಾಡಬಾರದು ಅಂತ ಹೇಳಿದ್ದಾರೆ. ನಾವು ಮಾತಾಡದೇ ಪೊಲೀಸರು ರಾಜಕೀಯ ಮಾತಾಡುತ್ತಾರಾ? ಔರಂಗಜೇಬನ ಬಗ್ಗೆ ಮಾತನಾಡಿದರೆ ರಾಜಕರಣವಾಗುತ್ತಾ? ಸಿದ್ದರಾಮಯ್ಯರ ತುಷ್ಟೀಕರಣ ಬಗ್ಗೆ ಮಾತಾನಾಡಿದರೆ ರಾಜಕಾರಣವಾಗುತ್ತಾ? ರಾಜ್ಯವನ್ನು ಮತಾಂಧ ಕೇಂದ್ರವಾಗಿ ಬದಲಾಯಿಸುತ್ತಿದ್ದಾರೆ. ಬಿಜೆಪಿ ದೊಡ್ಡ ಪಾರ್ಟಿ, ನೀವು ಹಿಂಗೆ ಮಾಡಿದರೆ ನಾವು ಸುಮ್ಮನಿರಲ್ಲ. ಅವರು ಕೊಲೆ ಮಾಡಿದರೂ ನಡೆಯುತ್ತದೆ. ಮತಾಂಧ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಪರವಾಗಿದೆ ಎಂದು ಆಕ್ರೋಶ ಹೊರಹಾಕಿದರು.