ಪಹಲ್ಗಾಮ್, ಜೂ. 22 (DaijiworldNews/AA): ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಂಧಿಸಿದೆ.

ಆರೋಪಿಗಳನ್ನು ಪಹಲ್ಗಾಮ್ನ ಬಟ್ಕೋಟೆಯ ಪರ್ವೇಜ್, ಅಹ್ಮದ್ ಜೋಥರ್ ಮತ್ತು ಪಹಲ್ಗಾಂನ ಹಿಲ್ ಪಾರ್ಕ್ನ ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ.
ಎನ್ಐಎ ಪ್ರಕಾರ, ಬಂಧಿತ ವ್ಯಕ್ತಿಗಳು ದಾಳಿಯಲ್ಲಿ ಭಾಗಿಯಾಗಿರುವ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುರುತನ್ನು ಬಹಿರಂಗಪಡಿಸಿದ್ದಾರೆ. ಆ ಉಗ್ರರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ ಗೆ ಸಂಬಂಧಿಸಿದ ಪಾಕಿಸ್ತಾನಿ ಪ್ರಜೆಗಳು ಎಂಬುದು ದೃಢಪಟ್ಟಿದೆ. ದಾಳಿಗೂ ಮುನ್ನ ಪರ್ವೈಜ್ ಮತ್ತು ಬಶೀರ್ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರಿಗೆ ಹಿಲ್ ಪಾರ್ಕ್ನಲ್ಲಿರುವ ಕಾಲೋಚಿತ ಧೋಕ್ (ಗುಡಿಸಲು)ನಲ್ಲಿ ಆಶ್ರಯ ನೀಡಿದ್ದರು ಎಂದು ತಿಳಿಸಿದೆ.
ಬಂಧಿತರು ಭಯೋತ್ಪಾದಕರಿಗೆ ಊಟ, ವಸತಿಯನ್ನು ನೀಡಿದ್ದರು. 26 ಅಮಾಯಕ ಪ್ರವಾಸಿಗರನ್ನು ಬಲಿತೆಗೆದುಕೊಂಡ ಮತ್ತು 16 ಜನರನ್ನು ಗಂಭೀರವಾಗಿ ಗಾಯಗೊಳಿಸಿದ ಭೀಕರ ದಾಳಿಯಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಈ ಇಬ್ಬರನ್ನು ಬಂಧಿಸಲಾಗಿದೆ ಎಂದು ಎನ್ಐಎ ಮಾಹಿತಿ ನೀಡಿದೆ.