ಬೆಂಗಳೂರು, ಜೂ. 21 (DaijiworldNews/AA): ಇಸ್ರೇಲ್-ಇರಾನ್ ಯುದ್ಧದಲ್ಲಿ ಭಾರತ ಇರಾನ್ ಪರವಾಗಿ ನಿಲ್ಲುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಎರಡು ಕಡೆ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸುತ್ತಿದ್ದರೂ ಭಾರತ ಇಲ್ಲಿಯವರೆಗೆ ಯಾವುದೇ ದೇಶದ ಪರ ನಿಲ್ಲದೇ ತಟಸ್ಥವಾಗಿ ನಿಲುವು ತಳೆದಿದೆ. ಈ ಹಿನ್ನೆಲೆ ಇಂದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬರಹವನ್ನು ಹಂಚಿಕೊಂಡ ಸಿದ್ದರಾಮಯ್ಯ ಅವರು ಇರಾನ್ ಪರ ನಿಲ್ಲುವಂತೆ ಕೇಂದ್ರವನ್ನು ಒತ್ತಾಯಿಸಿರುತ್ತಾರೆ.
ಇರಾನ್ ಮೇಲೆ ಇಸ್ರೇಲ್ ನಡೆಸಿದ ಅಪಾಯಕಾರಿ ದಾಳಿ ಕಾನೂನುಬಾಹಿರ. ಇದು ಪ್ರಾದೇಶಿಕ ಶಾಂತಿಗೆ ಬೆದರಿಕೆ ಹಾಕುತ್ತದೆ ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸೋನಿಯಾ ಗಾಂಧಿಯವರ ಲೇಖನವು ನಾಗರಿಕರ ಜೀವಗಳು ಬಲಿಯಾದಾಗ, ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಾಗ ಮತ್ತು ರಾಜತಾಂತ್ರಿಕತೆಯನ್ನು ತ್ಯಜಿಸಿದಾಗ ಭಾರತ ಮೌನವಾಗಿರಲು ಸಾಧ್ಯವಿಲ್ಲ ಎಂಬುದನ್ನು ಪ್ರಬಲವಾಗಿ ನೆನಪಿಸುತ್ತದೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕಾಶ್ಮೀರ ಸೇರಿದಂತೆ ನಿರ್ಣಾಯಕ ಸಮಯದಲ್ಲಿ ಇರಾನ್ ಭಾರತದ ಪರವಾಗಿ ನಿಂತಿದ್ದರೂ ಕೇಂದ್ರ ಸರ್ಕಾರದ ಮೌನವಾಗಿದೆ. ಈ ಮೊದಲು ಗಾಜಾ ಈಗ ಇರಾನ್ ವಿಚಾರಲ್ಲಿ ಮೌನವಾಗಿರುವುದು ಶಾಂತಿಯನ್ನು ಪ್ರತಿಪಾದಿಸುವ ನಮ್ಮ ವಿದೇಶಾಂಗ ನೀತಿಯ ನಿರ್ಗಮನವನ್ನು ಸೂಚಿಸುತ್ತದೆ. ಪಶ್ಚಿಮ ಏಷ್ಯಾದಲ್ಲಿ ನಮ್ಮದೇ ಆದ ದೀರ್ಘಕಾಲೀನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಭಾರತ ಈಗ ಮಾತನಾಡಬೇಕು ಎಂದು ಪೋಸ್ಟ್ ಮಾಡಿದ್ದಾರೆ.