ಹಾಸನ, ಜೂ. 21 (DaijiworldNews/AA): ಭಾರೀ ಮಳೆಯಿಂದ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಘಟನೆ ಹಾಸನದ ಸಕಲೇಶಪುರ ಯಡೆಕುಮಾರಿ ಎಂಬಲ್ಲಿ ನಡೆದಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.




ಕಿಲೋಮೀಟರ್ ಸಂಖ್ಯೆ 74 & 75ರ ನಡುವಿನ ಅರೆಬೆಟ್ಟ ಮತ್ತು ಯಡೆಕುಮಾರಿ ಮಧ್ಯೆ ಭಾಗದಲ್ಲಿ ರೈಲ್ವೆ ಹಳಿ ಮೇಲೆ ಬಂಡೆ ಕಲ್ಲುಗಳು ಬಿದ್ದಿವೆ. ಭಾರೀ ಗಾತ್ರದ ಬಂಡೆ ಉರುಳಿ ಬಿದ್ದ ಪರಿಣಾಮ ಹಳಿಗೆ ಹಾನಿಯಾಗಿದೆ. ಇದರಿಂದಾಗಿ ಬೆಂಗಳೂರು-ಕಣ್ಣೂರು ಘಾಟ್, ಬೆಂಗಳೂರು-ಮುರುಡೇಶ್ವರ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಬಂಡೆ ಬಿದ್ದಿರುವ ಸ್ಥಳದಿಂದ ಸ್ವಲ್ಪ ದೂರಕ್ಕೆ ಬಂದು ನಿಂತಿದ್ದು, ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ರೈಲು ಸ್ಥಗಿತಗೊಂಡಿದ್ದರಿಂದ ನೂರಾರು ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದು, ಅಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೆ ಕಾಫಿ, ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ಬೇರೆ ವಾಹನದಲ್ಲಿ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ.
ಇನ್ನು ರೈಲ್ವೆ ಹಳಿ ಮೇಲೆ ಬಿದ್ದಿರುವ ಬಂಡೆ ಕಲ್ಲು ಹಾಗೂ ಮಣ್ಣನ್ನು ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ.