ಅಹಮದಾಬಾದ್, ಜೂ. 12 (DaijiworldNews/AK): ಏರ್ ಇಂಡಿಯಾ ವಿಮಾನ ದುರಂತದಲ್ಲಿ 40 ವರ್ಷದ ವಿಶ್ವಾಸ್ ಕುಮಾರ್ ರಮೇಶ್ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ವಿಮಾನ ನಿಲ್ದಾಣದ ಟೇಕಾಫ್ ಆದ 30 ಸೆಕೆಂಡ್ಗಳ ನಂತರ ದೊಡ್ಡ ಶಬ್ಧ ಕೇಳಿ ಬಂತು ನಂತರ ವಿಮಾನ ಪತನ ಹೊಂದಿತು ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವಾಸ್ ಅವರ ಎದೆ , ಕಣ್ಣು, ಪಾದಗಳು ಗಾಯಗೊಂಡಿದ್ದು ಅವರು ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ಪತನಗೊಂಡ ಸ್ಥಳದಿಂದ ಅವರು ನಡೆದುಕೊಂಡೇ ಅಂಬುಲೆನ್ಸ್ ಹತ್ತುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ನಾನು ಎದ್ದು ನೋಡಿದಾಗ ನನ್ನ ಸುತ್ತಲೂ ಶವಗಳ ರಾಶಿ ಇತ್ತು. ಸುತ್ತಲೂ ಛಿದ್ರಗೊಂಡ ವಿಮಾನದ ಭಾಗಗಳು ಬಿದ್ದಿದ್ದವು. ಭಯಗೊಂಡು ನಾನು ಓಡಲು ಆರಂಭಿಸಿದ್ದೆ. ಈ ವೇಳೆ ಯಾರೋ ನನ್ನನ್ನು ಹಿಡಿದು ಅಂಬುಲೆನ್ಸ್ ಮೂಲಕ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರೆ ಎಂದು ವಿವರಿಸಿದರು.
ಬ್ರಿಟಿಷ್ ಪ್ರಜೆಯಾಗಿರುವ ವಿಶ್ವಾಸ್ ತನ್ನ ಕುಟುಂಬವನ್ನು ಭೇಟಿ ಮಾಡಲು ಕೆಲವು ದಿನಗಳ ಕಾಲ ಭಾರತಕ್ಕೆ ಬಂದಿದ್ದರು. ಇಂದು ಸಹೋದರ ಅಜಯ್ ಕುಮಾರ್ ರಮೇಶ್ (45) ಜೊತೆ ಯುಕೆಗೆ ತೆರಳುತ್ತಿದ್ದರು. ವಿಶ್ವಾಸ್ ಅವರು 20 ವರ್ಷಗಳಿಂದ ಲಂಡನ್ನಲ್ಲಿ ವಾಸವಾಗಿದ್ದಾರೆ.
ನನ್ನ ಸಹೋದರ ಅಜಯ್ ಬೇರೆ ಸಾಲಿನಲ್ಲಿ ಕುಳಿತಿದ್ದರು. ಅವರು ನನಗೆ ಸಿಕ್ಕಿಲ್ಲ. ಅವರನ್ನು ದಯವಿಟ್ಟು ಪತ್ತೆ ಹಚ್ಚಲು ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.