ದೆಹಲಿ, ಜೂ. 09 (DaijiworldNews/AA): ಭಾರತದಲ್ಲಿ ವೈದ್ಯಕೀಯ ಕ್ಷೇತ್ರ ಮತ್ತು ಯುಪಿಎಸ್ಸಿ ಅತ್ಯಂತ ಪ್ರತಿಷ್ಠಿತ ವೃತ್ತಿ ಮಾರ್ಗಗಳಾಗಿವೆ. ಈ ಎರಡೂ ಕ್ಷೇತ್ರಗಳಲ್ಲಿ ಕೆಲವೇ ಕೆಲವು ಅಭ್ಯರ್ಥಿಗಳು ಯಶಸ್ಸು ಸಾಧಿಸುತ್ತಾರೆ. ತಾನು ಆಯ್ಕೆ ಮಾಡಿಕೊಂಡಿದ್ದ ವೈದ್ಯಕೀಯ ಕೇತ್ರವನ್ನು ತೊರೆದು ಯುಪಿಎಸ್ಸಿ ಪರೀಕ್ಷೆ ಬರೆದು ಐಎಫ್ಎಸ್ ಅಧಿಕಾರಿಯಾದ ಪಲಾ ಮಿಶ್ರಾ ಸ್ಫೂರ್ತಿದಾಯಕ ಕಥೆ ಇದು.

2020ರ ಬ್ಯಾಚ್ನ ಐಎಫ್ಎಸ್ ಅಧಿಕಾರಿ ಅಪಲಾ ಮಿಶ್ರಾ ಘಾಜಿಯಾಬಾದ್ ಮೂಲದವರು. 1997ರಲ್ಲಿ ಜನಿಸಿದ ಇವರು ಸೇನಾ ಹಿನ್ನೆಲೆಯಿಂದ ಬಂದವರು. ಇವರ ತಂದೆ ಅಮಿತಾಭ್ ಮಿಶ್ರಾ ಕರ್ನಲ್, ಸಹೋದರ ಅಭಿಷೇಕ್ ಮಿಶ್ರಾ ಸೇನೆಯಲ್ಲಿ ಮೇಜರ್ ಆಗಿದ್ದಾರೆ. ಇವರ ತಾಯಿ, ಡಾ. ಅಲ್ಪನಾ ಮಿಶ್ರಾ, ದೆಹಲಿ ವಿಶ್ವವಿದ್ಯಾಲಯದ ಹಿಂದಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಅಪಲಾ ಮಿಶ್ರಾ ಆರ್ಮಿ ಕಾಲೇಜಿನಲ್ಲಿ ಪದವಿ ಪಡೆದಿದ್ದು, 10ನೇ ತರಗತಿಯವರೆಗೆ ಡೆಹ್ರಾಡೂನ್ನಲ್ಲಿ ಅಧ್ಯಯನ ಮಾಡಿದ್ದಾರೆ. ನಂತರ ದೆಹಲಿಗೆ ತೆರಳಿ ರೋಹಿಣಿ ಕಾಲೇಜಿನಿಂದ 12ನೇ ತರಗತಿ ಪೂರೈಸಿದರು. ಇದರ ಜೊತೆಗೆ, ಅಪಲಾ ಆರ್ಮಿ ಕಾಲೇಜಿನಲ್ಲಿ ಡೆಂಟಲ್ ಸರ್ಜರಿಯಲ್ಲಿ(ಬಿಡಿಎಸ್) ಪದವಿಯನ್ನು ಪಡೆದರು. ಆದರೆ ಅವರಿಗೆ ಸಮಾಜಕ್ಕಾಗಿ ಕೆಲಸ ಮಾಡಬೇಕೆಂಬ ಬಯಕೆಯಿತ್ತು. ಅದಕ್ಕಾಗಿ ಬಿಡಿಎಸ್ ಪದವಿ ಪೂರ್ಣಗೊಳಿಸಿದ ನಂತರ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದರು.
ನಂತರ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 9ನೇ ರ್ಯಾಂಕ್ ಪಡೆಯುವುದರ ಮೂಲಕ 2020ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ಪರೀಕ್ಷೆಯನ್ನು ಅಪಲಾ ಮಿಶ್ರಾ ಮೂರು ವರ್ಷಗಳ ಬಳಿಕ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಮತ್ತು ರ್ಯಾಂಕ್ ಪಡೆದಿದ್ದರೂ ಅವರು ಐಎಎಸ್ ಅಧಿಕಾರಿಯಾಗಲು ಬಯಸಲಿಲ್ಲವಂತೆ. ಅಪಲಾ ಮಿಶ್ರಾ ಅವರಿಗೆ ಮೊದಲಿನಿಂದಲೂ ಐಎಫ್ಎಸ್ ಅಧಿಕಾರಿಯಾಗಬೇಕೆಂಬ ಗುರಿ ಇತ್ತಂತೆ. ಹೀಗಾಗಿ ಐಎಫ್ಎಸ್ ಅಧಿಕಾರಿಯಾಗುವ ಹಾದಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ.
ಅಪಲಾ ಮಿಶ್ರಾ ಅವರು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಅವರು ಯುಪಿಎಸ್ಸಿ ಪರೀಕ್ಷೆಯ ಸಂದರ್ಶನದಲ್ಲಿ 275 ಅಂಕಗಳಿಗೆ 215 ಅಂಕಗಳನ್ನು ಗಳಿಸಿದ್ದಾರೆ. ಈ ಮೂಲಕ ಐದು ವರ್ಷಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.