ನವದೆಹಲಿ,ಜೂ. 06 (DaijiworldNews/AK): ಪ್ರಧಾನಿ ನರೇಂದ್ರ ಮೋದಿಹೊಸದಾಗಿ ಆಯ್ಕೆಯಾದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರೊಂದಿಗೆ ಇಂದು ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಈ ಸಮಯದಲ್ಲಿ ಅವರು ಇತ್ತೀಚಿನ ಚುನಾವಣಾ ವಿಜಯಕ್ಕಾಗಿ ಮಾರ್ಕ್ ಕಾರ್ನಿ ಅವರನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ಈ ತಿಂಗಳ ಕೊನೆಯಲ್ಲಿ ಕನನಾಸ್ಕಿಸ್ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾ ಪ್ರಧಾನಿ ಆಹ್ವಾನಿಸಿದ್ದಾರೆ.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರಿಂದ ಕರೆ ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ. ಅವರ ಇತ್ತೀಚಿನ ಚುನಾವಣಾ ವಿಜಯಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ. ಈ ತಿಂಗಳ ಕೊನೆಯಲ್ಲಿ ಕನನಾಸ್ಕಿಸ್ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಆಹ್ವಾನ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.
ಭಾರತ ಮತ್ತು ಕೆನಡಾ ನಡುವಿನ ಹದಗೆಟ್ಟ ದ್ವಿಪಕ್ಷೀಯ ಸಂಬಂಧಗಳ ಕಾರಣದಿಂದಾಗಿ ಭಾರತವನ್ನು ಶೃಂಗಸಭೆಗೆ ಆಹ್ವಾನಿಸಲಾಗಿಲ್ಲ ಎಂಬ ವಿಪಕ್ಷಗಳ ಆರೋಪದ ನಡುವೆಯೇ ಈ ಆಹ್ವಾನ ಬಂದಿದೆ.
ಪ್ರಧಾನಿ ಮಾರ್ಕ್ ಕಾರ್ನಿ ನೇತೃತ್ವದ ಕೆನಡಾ ಸರ್ಕಾರವು ಜೂನ್ 15-17ರಂದು ಆಲ್ಬರ್ಟಾದ ಕನನಾಸ್ಕಿಸ್ ರೆಸಾರ್ಟ್ನಲ್ಲಿ ಈ ವರ್ಷದ ಜಿ7 ಶೃಂಗಸಭೆಯನ್ನು ಆಯೋಜಿಸಲು ಸಜ್ಜಾಗಿದೆ. ಕೆನಡಾದ ಕನನಾಸ್ಕಿಸ್ನಲ್ಲಿ ನಡೆಯುವ G7 ಶೃಂಗಸಭೆಯು ಪಟ್ಟಣವು ಎರಡನೇ ಬಾರಿಗೆ ಜಾಗತಿಕ ಸಭೆಯನ್ನು ಆಯೋಜಿಸಲಿದೆ. ಮೊದಲನೆಯದು 2002ರಲ್ಲಿ ನಡೆದಿತ್ತು.
ಇದು ವಿಶ್ವದ ಅತ್ಯಂತ ಮುಂದುವರಿದ ದೇಶಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ಗಳನ್ನು ಒಳಗೊಂಡಿರುವ ಒಂದು ಗುಂಪು. ಇದಲ್ಲದೆ, ಯುರೋಪಿಯನ್ ಒಕ್ಕೂಟವು ಇಲ್ಲಿ ಚರ್ಚೆಗಳಲ್ಲಿ ಭಾಗವಹಿಸುತ್ತದೆ.