ಬೆಂಗಳೂರು, ಜೂ. 04 (DaijiworldNews/AA): ತೆರೆದ ಬಸ್ನಲ್ಲಿ ಆರ್ಸಿಬಿ ವಿಕ್ಟರಿ ಪರೇಡ್ ಇಲ್ಲ. ಆರ್ಸಿಬಿ ಆಟಗಾರರು ಬಸ್ಸಿನಲ್ಲಿ ಬಂದು ಬಸ್ಸಿನಲ್ಲಿ ಹೋಗುತ್ತಾರೆ ಎಂದು ಗೃಹಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸಂಜೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆ ಗ್ರ್ಯಾಂಡ್ ಸ್ಟೆಪ್ ಬಳಿ ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ಒಪ್ಪದ ಕಾರಣ ಪರೇಡ್ಗೆ ಬ್ರೇಕ್ ಹಾಕಲಾಗಿದೆ. ಪೊಲೀಸ್ ಕಮೀಷನರ್ ಪರೇಡ್ಗೆ ಒಪ್ಪಿಲ್ಲ. ವಿಧಾನಸೌಧ ಹಾಗೂ ಹೈಕೋರ್ಟ್ ಭದ್ರತೆ ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಆರ್ಸಿಬಿ ತಂಡದ ಗೆಲುವಿಗೆ ಕರ್ನಾಟಕ ಸರ್ಕಾರ ಅಭಿನಂದನೆ ಸಲ್ಲಿಸಲಿದೆ. ಆದರೆ, ಭದ್ರತಾ ಕಾರಣಗಳಿಂದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯುವುದಿಲ್ಲ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ಆರ್ಸಿಬಿ ತಂಡದ ಪರವಾಗಿ ಒಬ್ಬರು ಮಾತನಾಡಲಿದ್ದಾರೆ. ನಂತರ ಎಲ್ಲ ಆಟಗಾರರು ಬಸ್ನಲ್ಲಿ ಸ್ಟೇಡಿಯಂಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಈ ಮೂಲಕ ರಾಜ್ಯ ಸರ್ಕಾರ ಆರ್ಸಿಬಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಆರ್ಸಿಬಿ ತಂಡ ನೇರವಾಗಿ ವಿಧಾನಸೌಧದಿಂದ ಬಸ್ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಲಿದ್ದು, ಅಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ.