ಬೆಂಗಳೂರು, ಮೇ. 21 (DaijiworldNews/TA): ಆನೇಕಲ್ ತಾಲೂಕಿನ ಹೊಸೂರು ಮುಖ್ಯ ರಸ್ತೆಯ ಬಳಿಯ ಹಳೆಯ ಚಂದಾಪುರ ರೈಲ್ವೆ ಸೇತುವೆಯ ಬಳಿ, ಹರಿದ ನೀಲಿ ಬಣ್ಣದ ಸೂಟ್ಕೇಸ್ನಲ್ಲಿ ಸುಮಾರು ಎಂಟರಿಂದ ಹತ್ತು ವರ್ಷ ವಯಸ್ಸಿನ ಅಪರಿಚಿತ ಹುಡುಗಿಯ ಶವ ಬುಧವಾರ ಪತ್ತೆಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತದೇಹವನ್ನು ಸೂಟ್ಕೇಸ್ನಲ್ಲಿ ಬೇರೆಡೆ ತುಂಬಿಸಿ ನಂತರ ಚಲಿಸುವ ರೈಲಿನಿಂದ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ವಿಚಾರವಾಗಿ ಹೆಚ್ಚಿನ ಮಾಹಿತಿಗೆ ಪೊಲೀಸರು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಬಾಲಕಿಯನ್ನು ಗುರುತಿಸಲು ವಿವರವಾದ ತನಿಖೆ ನಡೆಯುತ್ತಿದೆ.
ಇದಕ್ಕೂ ಮುನ್ನ ಮೇ 12 ರಂದು, ರಾಮನಗರ ಜಿಲ್ಲೆಯ ರೈಲ್ವೆ ಹಳಿಗಳ ಬಳಿ 14 ವರ್ಷದ ಕಿವುಡ ಮತ್ತು ಮೂಕ ಬುಡಕಟ್ಟು ಬಾಲಕಿಯ ಶವ ಪತ್ತೆಯಾಗಿತ್ತು. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದರು. "ಪ್ರತಿಕಾರ, ನಿಂದನೆ ಅಥವಾ ಇನ್ನಾವುದೇ ಪ್ರಕರಣವಾಗಿದ್ದರೂ ನ್ಯಾಯವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ" ಎಂದು ಅವರು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ನಂತರ ಹೇಳಿದ್ದರು.
ಮಾರ್ಚ್ ಆರಂಭದಲ್ಲಿ, ಇದೇ ರೀತಿಯ ಪ್ರಕರಣದಲ್ಲಿ, ಬೆಂಗಳೂರಿನ ಹುಳಿಮಾವುವಿನ ಮನೆಯೊಂದರಲ್ಲಿ ಸೂಟ್ಕೇಸ್ನಲ್ಲಿ ತುಂಬಿದ ಸ್ಥಿತಿಯಲ್ಲಿ 32 ವರ್ಷದ ಗೌರಿ ಅನಿಲ್ ಸಂಬೇಕರ್ ಅವರ ಶವ ಪತ್ತೆಯಾಗಿತ್ತು. ಆಕೆಯ ಪತಿ ರಾಕೇಶ್ ಸಂಬೇಕರ್ ಅವರನ್ನು ಪುಣೆಯಲ್ಲಿ ಬಂಧಿಸಲಾಗಿದ್ದು, ಅವರು ಆಕೆಯ ಪೋಷಕರಿಗೆ ಕರೆ ಮಾಡಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.