ಬೆಂಗಳೂರು, ಮೇ. 19 (DaijiworldNews/AK): ನಗರದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಸುರಿದ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿದೆ. ನಿನ್ನೆ ತಡರಾತ್ರಿ ಕೂಡ ಮಳೆ ಆರ್ಭಟಿಸಿದ್ದು, ಮಳೆಗೆ ಗೋಡೆ ಕುಸಿದು 35 ವರ್ಷದ ಮಹಿಳೆಯೋರ್ವರು ಪ್ರಾಣ ಕಳೆದುಕೊಂಡಿದ್ದಾರೆ.



ನಗರದ ವೈಟ್ ಫೀಲ್ಡ್ನ ಚನ್ನಸಂದ್ರದಲ್ಲಿ ದುರಂತ ಸಂಭವಿಸಿದೆ. ಖಾಸಗಿ ಕಂಪನಿಯ ಉದ್ಯೋಗಿ ಶಶಿಕಲಾ(35) ಮೃತ ಮಹಿಳೆ. ವೈಟ್ ಫೀಲ್ಡ್ ಇಂಡರ್ಷಿಯಲ್ ಏರಿಯಾದ ಇಸ್ಮೋ ಮೈಕ್ರೋ ಸಿಸ್ಟ್ ಕಂಪನಿಯಲ್ಲಿ ಮೃತ ಶಶಿಕಲಾ ಕೆಲಸ ಮಾಡುತ್ತಿದ್ದರು. ಎಂದಿನಂತೆ ಇಂದು ಕೂಡ ಬೆಳಗ್ಗೆ 6.40 ನಿಮಿಷಕ್ಕೆ ಫಸ್ಟ್ ಶಿಫ್ಟ್ಗೆ ಕೆಲಸಕ್ಕೆ ಬಂದಿದ್ದರು. ಕೆಲಸಕ್ಕೆ ಹಾಜರಾಗಿ ಕೆಲವೇ ಹೊತ್ತಿನಲ್ಲೆ ಬೃಹತ್ ಗೋಡೆ ಕುಸಿದು ದುರಂತ ಸಂಭವಿಸಿದೆ.
ಶಶಿಕಲಾ ಕೆಲಸ ಮಾಡಿಕೊಂಡಿದ್ದ ಕಂಪನಿಯಿಂದಲೇ ಪರಿಹಾರಕ್ಕೆ ಬಿಬಿಎಂಪಿ ಪಾಲಿಕೆ ಮುಖ್ಯ ಆಯುಕ್ತರಿಂದ ಸೂಚನೆ ಹಿನ್ನೆಲೆ ಮೃತ ಮಹಿಳೆಯ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರ ಧನ ಘೋಷಿಸಲಾಗಿದೆ.
ಬೆಂಗಳೂರಿನ ಕೆಂಗೇರಿಯಲ್ಲಿ 132 ಮಿಲಿ ಮೀಟರ್, ವಡೇರಹಳ್ಳಿಯಲ್ಲಿ 132 ಮಿ.ಮೀ, ಮಾರತಹಳ್ಳಿ 91 ಮಿ.ಮೀ, ಚಿಕ್ಕಬಾಣವಾರ 127 ಮಿ.ಮೀ., ಮಾದನಾಯಕಹಳ್ಳಿ 116.3 ಮಿ.ಮೀ, ಕೊಡಿಗೆಹಳ್ಳಿ 100 ಮಿ.ಮೀ., ಕೋರಮಂಗಲ 96 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮಾಹಿತಿ ನೀಡಿದೆ.