ನವದೆಹಲಿ, ಮೇ. 09 (DaijiworldNews/AK): ಭಾರತ ಸಲಾಲ್ ಹಾಗೂ ಬಾಗ್ಲಿಹಾರ್ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಿದ್ದು, ಪಾಕ್ಗೆ ಪ್ರವಾಹ ಭೀತಿ ಎದುರಾಗಿದೆ. ಈಗ ಭಾರತ ಪಾಕಿಸ್ತಾನದ ವಿರುದ್ಧ ಜಲದಾಳಿ ನಡೆಸಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮೇ 6-7ರ ರಾತ್ರಿ ಭಾರತ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿತ್ತು. ಗುರುವಾರವೂ ಭಾರತ ಲಾಹೋರ್ ಮತ್ತು ಕರಾಚಿ ಸೇರಿದಂತೆ ಪಾಕಿಸ್ತಾನದ 9 ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿತ್ತು.
ಗುರುವಾರ ಸಲಾಲ್ ವಿದ್ಯುತ್ ಯೋಜನೆಯ ಮೂರು ಗೇಟ್ಗಳು ಮತ್ತು ಬಾಗ್ಲಿಹಾರ್ ಯೋಜನೆಯ ಎರಡು ಗೇಟ್ಗಳನ್ನು ತೆರೆಯಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಇದರ ಅಡಿಯಲ್ಲಿ, ಚೆನಾಬ್ ನದಿಗೆ ನಿರ್ಮಿಸಲಾದ ಸಲಾಲ್ ಅಣೆಕಟ್ಟಿನ ಎಲ್ಲಾ ದ್ವಾರಗಳನ್ನು ಮುಚ್ಚಲಾಯಿತು.
ಈಗ ಭಾರತ ಚೆನಾಬ್ ನದಿ ಮತ್ತು ಸಲಾಲ್ ಅಣೆಕಟ್ಟಿನ ನೀರನ್ನು ಬಿಡುಗಡೆ ಮಾಡಿದೆ. ರಾಂಬನ್ನಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ಗೇಟ್ ಅನ್ನು ತೆರೆಯಲಾಗಿದೆ.