ನವದೆಹಲಿ, ಏ.28 (DaijiworldNews/AA): ಹಿರಿಯ ನಟ ಅನಂತ್ನಾಗ್, ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತರೂ ಆಗಿರುವ ಮಾಜಿ ಹಾಕಿ ಆಟಗಾರ ಪಿ.ಆರ್ ಶ್ರೀಜೇಶ್ಗೆ ರಾಷ್ಟ್ರಪತಿ ಭವನದಲ್ಲಿಂದು ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 2025ನೇ ಸಾಲಿನ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಆರ್ ಅಶ್ವಿನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಹಾಗೂ ಪಿ.ಆರ್ ಶ್ರೀಜೇಶ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಈ ವೇಳೆ ಮೇಜರ್ ಧ್ಯಾನ್ ಚಂದ್ ನಂತರ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ 2ನೇ ಭಾರತೀಯ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಪಿ.ಆರ್ ಶ್ರೀಜೇಶ್ ಭಾಜನರಾದರು.
ಹಿರಿಯ ನಟ ಅನಂತ್ನಾಗ್, ನಟ ಅಜಿತ್ ಕುಮಾರ್, ಬಾಲಯ್ಯ, ಸಿಂಗರ್ ಅರಿಜಿತ್ ಸಿಂಗ್, ಶೇಖರ್ ಕಪೂರ್ ಸೇರಿದಂತೆ ಹಲವು ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಇನ್ನು ಅನಂತ್ನಾಗ್ ಸೇರಿದಂತೆ ರಾಜ್ಯದ ಒಂಭತ್ತು ಮಂದಿ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪಿಟೀಲು ವಾದಕ ಮತ್ತು ಸಂಯೋಜಕ ಡಾ. ಎಲ್. ಸುಬ್ರಮಣಿಯಂ ಪದ್ಮವಿಭೂಷಣ ಪ್ರಶಸ್ತಿ ಪಡೆದರು. ಹಿರಿಯ ಸಂಪಾದಕ ಮತ್ತು ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಎ. ಸೂರ್ಯ ಪ್ರಕಾಶ್ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಕಲಾ ಕ್ಷೇತ್ರದ ಸಾಧನೆಗಾಗಿ ಬಾಗಲಕೋಟೆಯ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೆಕ್ಯಾತರ, ಹಾಸನ ರಘು, ಉದ್ಯಮ ಕ್ಷೇತ್ರದಿಂದ ಪ್ರಶಾಂತ್ ಪ್ರಕಾಶ್, ಕಲಾ ಕ್ಷೇತ್ರದ ಸಾಧನೆಗಾಗಿ ರಿಕ್ಕಿ ಕೇಜ್, ಜಾನಪದ ಗಾಯಕ ವೆಂಕಪ್ಪ ಅಂಭಾಜಿ ಸುಗತೇಕರ, ಹಿರಿಯ ಕ್ಯಾನ್ಸರ್ ಚಿಕಿತ್ಸಾ ತಜ್ಞೆ ವಿಜಯಲಕ್ಷ್ಮೀ ದೇಶಮಾನೆ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.