ಮಹಾರಾಷ್ಟ್ರ, ಏ.28 (DaijiworldNews/AA): ಪಾಕಿಸ್ತಾನದ ಬಜೆಟ್ ನಮ್ಮ ಮಿಲಿಟರಿ ಬಜೆಟ್ಗೂ ಸಮನಾಗಿಲ್ಲ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ವಕ್ಫ್ ಕಾಯ್ದೆ ವಿರೋಧಿಸಿ ಮಹಾರಾಷ್ಟ್ರದ ಪರ್ಭಾನಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ವಿರುದ್ಧ ಕಿಡಿಕಾರಿದ ಅವರು, ಪಾಕಿಸ್ತಾನದಲ್ಲಿ ಕುಳಿತು ಬಾಯಿಗೆ ಬಂದಂತೆ ಮಾತನಾಡುವ ಅವಿವೇಕಿಗಳಿಗೆ ಬಹುಶಃ ಗೊತ್ತಿಲ್ಲ. ಪಾಕಿಸ್ತಾನವು ಸಮಯದಲ್ಲಿ ಭಾರತಕ್ಕಿಂತ ಅರ್ಧ ಗಂಟೆ ಹಿಂದಿದೆ. ಆದರೆ, ಯೋಗ್ಯತೆಯಲ್ಲಿ ಅರ್ಧ ಶತಮಾನ ಹಿಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಆಗಿರಲಿ, ಭಯೋತ್ಪಾದಕ ಸಂಘಟನೆಯಾದ ಐಸಿಸ್ ಆಗಿರಲಿ ಅಥವಾ ಇನ್ಯಾವುದೇ ಭಯೋತ್ಪಾದಕ ಸಂಘಟನೆಯಾಗಿರಲಿ, ಈ ಎಲ್ಲಾ ಗುಂಪುಗಳು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಜಗಳವನ್ನು ನೋಡಲು ಬಯಸುತ್ತವೆ. ಅದಕ್ಕಾಗಿಯೇ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ ಕಿಡಿಕಾರಿದ್ದಾರೆ.
ಪಾಕಿಸ್ತಾನವು ಭಾರತವನ್ನು ಗುರಿಯಾಗಿಸಲು ಹಲವು ವರ್ಷಗಳಿಂದ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದೆ. ಆದರೆ, ಪಾಕಿಸ್ತಾನ ಒಂದಲ್ಲ ಒಂದು ದಿನ ತನ್ನ ಕುತಂತ್ರಗಳಿಗೆ ತಕ್ಕ ಬೆಲೆ ತೆರಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.