ಬೆಂಗಳೂರು, ಏ.28 (DaijiworldNews/AK):ರಾಜ್ಯದಲ್ಲಿ ಜನಿವಾರ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ಶುರುವಾಗಿದೆ. ರೈಲ್ವೆ ಇಲಾಖೆ ಪರೀಕ್ಷೆಗೆ ಹಾಜರಾಗಲು ಜನಿವಾರ, ಮಂಗಳಸೂತ್ರಕ್ಕೆ ನಿರ್ಬಂಧ ವಿಧಿಸಿರುವ ವಿಚಾರವಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ರೈಲ್ವೆ ಸಚಿವ ವಿ.ಸೋಮಣ್ಣ ಮಂಗಳಸೂತ್ರ ಹಾಗೂ ಜನಿವಾರ ತೆಗೆಸದಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ನಡೆಯಲ್ಲಿದ್ದು, ಈಗಾಗಲೇ ಪ್ರವೇಶ ಪತ್ರವು ಪರೀಕ್ಷಾರ್ಥಿಗಳ ಕೈ ಸೇರಿದೆ. ಪ್ರವೇಶ ಪತ್ರದಲ್ಲಿ ಜನಿವಾರ, ಮಂಗಳಸೂತ್ರ ತೆಗೆದು ಪರೀಕ್ಷೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಈ ವಿವಾದದ ಬೆನ್ನಲ್ಲೇ ರೈಲ್ವೆ ಇಲಾಖೆಯ ಪರೀಕ್ಷೆಯ ಪ್ರವೇಶಪತ್ರದಲ್ಲಿನ ಸೂಚನೆಗಳ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ನ ಮೂಲಕ ರೈಲ್ವೆ ಸಚಿವರಿಗೆ ದಕ್ಷಿಣ ಕನ್ನಡದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಚಿವ ವಿ.ಸೋಮಣ್ಣ ಮಂಗಳಸೂತ್ರ ಹಾಗೂ ಜನಿವಾರ ತೆಗೆಸದಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರೈಲ್ವೆ ಇಲಾಖೆಯ ಪರೀಕ್ಷೆಯ ಪ್ರವೇಶಪತ್ರದಲ್ಲಿನ ಸೂಚನೆಯು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ರೈಲ್ವೆ ಇಲಾಖೆಯ ಈ ಸೂಚನೆಗೆ ವಿ.ಹೆಚ್.ಪಿ ಮುಖಂಡ ಶರಣ್ ಪಂಪುವೆಲ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಸೂಚನೆ ಕೈಬಿಡುವಂತೆ ಜಿಲ್ಲಾಧಿಕಾರಿ ಹಾಗೂ ಸಂಸದರಿಗೆ ಆಗ್ರಹಿಸಿದ್ದಾರೆ.