ಬೆಂಗಳೂರು,ಏ.25 (DaijiworldNews/AK): ಕೆಪಿಎಸ್ಸಿಯ ಸುಮಾರು 70 ಸಾವಿರದಷ್ಟು ಪರೀಕ್ಷಾರ್ಥಿಗಳೆಲ್ಲರಿಗೆ ಸೂಕ್ತ ಕಾಲಾವಕಾಶ ನೀಡಿ ಮರುಪರೀಕ್ಷೆ ನಡೆಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮೇಲ್ಮನೆಯಲ್ಲಿ ಕೊಟ್ಟ ವಾಗ್ದಾನದ ರೀತಿಯಲ್ಲಿ ಸಹಾಯ ಮಾಡಬೇಕು ಎಂದು ಅವರು ಆಗ್ರಹಿಸಿದರು.ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅವಾಂತರಗಳನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಬಹುಕಾಲದಿಂದ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಆದ ಅನ್ಯಾಯ, ಕನ್ನಡಕ್ಕೆ ಆದ ಅಪಮಾನ, ಪ್ರಶ್ನೆಪತ್ರಿಕೆಗಳಲ್ಲಿನ ದೋಷ, ಹಲವಾರು ವಿಷಯಗಳ ಕುರಿತು ಅವರ ಹೋರಾಟ ನಡೆದಿತ್ತು. ನಾವು ಕೂಡ ವಿದ್ಯಾರ್ಥಿಗಳನ್ನು ಬೆಂಬಲಿಸಿ, ಅವರ ವಿಚಾರಗಳ ಬಗ್ಗೆ ಸದನದಲ್ಲಿ ಹಾಗೂ ಹೊರಗೂ ಸರಕಾರದ ಗಮನ ಸೆಳೆದಿದ್ದೇವೆ ಎಂದರು.
ಸರಕಾರವು ಅದಕ್ಕೆ ಉತ್ತರಿಸಿ, ಅವರಿಗೆ ಅನ್ಯಾಯ ಆಗಿದೆ. ಅದನ್ನು ಸರಿಪಡಿಸುವ ಕೆಲಸ ನಾವು ಕೂಡ ಮಾಡಿದ್ದೇವೆ. ಅದಕ್ಕಾಗಿಯೇ ಮರುಪರೀಕ್ಷೆ ಮಾಡಿದ್ದಾಗಿ ಹೇಳಿದ್ದರು. ಮರುಪರೀಕ್ಷೆಯಲ್ಲೂ ಮತ್ತೆ ಅದೇ ತಪ್ಪುಗಳು ಮರುಕಳಿಸಿದ್ದವು ಎಂದು ವಿವರಿಸಿದರು. ನಾವು ಸರಕಾರದ ಗಮನ ಸೆಳೆದಾಗ ಮುಖ್ಯಮಂತ್ರಿಗಳು ನಮ್ಮ ಮಾತಿಗೆ ಒಪ್ಪಿ, ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುತ್ತೇನೆ; ಈಗಾಗಲೇ ಅವರು ನ್ಯಾಯಾಲಯಕ್ಕೆ ಹೋದ ಕಾರಣ ತೀರ್ಪು ಹೊರಬರಬೇಕಿದೆ ಎಂದಿದ್ದರು ಎಂದು ವಿವರ ನೀಡಿದರು.
ಈಗ ಕೋರ್ಟ್ ತೀರ್ಮಾನ ಬಂದಿದೆ. ಕೋರ್ಟ್ಗೆ ಹೋಗಿದ್ದ 32 ವಿದ್ಯಾರ್ಥಿಗಳು ವಾದ ಮಂಡಿಸಿದ್ದರು. ಈ 32 ಜನರಿಗೆ ಮಾತ್ರ ಪರೀಕ್ಷೆ ನಡೆಸಲು ಕೋರ್ಟ್ ಆದೇಶ ಮಾಡಿದೆ. ವಿದ್ಯಾರ್ಥಿಗಳು ಅನ್ಯಾಯ ಆದ ಎಲ್ಲರಿಗೂ ಪರೀಕ್ಷೆ ನಡೆಸುವಂತೆ ಕೋರಿದ್ದರು. ಆಯೋಗದಲ್ಲಿ ತಪ್ಪಾಗಿದೆ ಎಂಬುದು ಇದರಿಂದ ಅರ್ಥವಾಗಿದೆ. ಸರಕಾರವು ಇದನ್ನು ಗಮನಿಸಿ ಆಗಿರುವ ದೋಷವನ್ನು ಸರಿಪಡಿಸಬೇಕು. 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಪತ್ತಿಗೆ ಸಿಲುಕಿದ್ದಾರೆ. ಅವರೆಲ್ಲರಿಗೂ ಮರುಪರೀಕ್ಷೆ ನಿಗದಿಪಡಿಸಿ ನಡೆಸಬೇಕೆಂದು ಒತ್ತಾಯಿಸಿದರು.
ಈ ಸರಕಾರ ವಿದ್ಯಾರ್ಥಿಗಳ ಪರವಾಗಿ ಇಲ್ಲ ಎಂದು ಅವರು ಆರೋಪಿಸಿದರು. ಒಂದು ವೇಳೆ ಇದ್ದಿದ್ದರೆ ಸರಕಾರವು ಅನ್ಯಾಯ ಆದುದನ್ನು ಸರಿಪಡಿಸುವುದಾಗಿ ಕೋರ್ಟಿಗೆ ಅರ್ಜಿ ಮೂಲಕ ತಿಳಿಸಬೇಕಿತ್ತು. ಆದರೆ, ಹಾಗೆ ಮಾಡಿಲ್ಲ ಎಂದು ಆಕ್ಷೇಪಿಸಿದರು.