ಬೆಂಗಳೂರು, ಏ.25 (DaijiworldNews/AA): ಪಹಲ್ಗಾಮ್ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಜೆಗಳು ಭಾರತ ತೊರೆಯುವಂತೆ ಕೇಂದ್ರ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಪಾಕ್ ಪ್ರಜೆಗಳ ಪತ್ತೆ ಕಾರ್ಯ ನಡೆದಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಧಿಕೃತವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳ ಪಟ್ಟಿ ತಯಾರಿ, ಪೊಲೀಸ್ ಇಲಾಖೆಯಿಂದ ನಡೆದಿದೆ. ಕೇಂದ್ರ ಸರ್ಕಾರದೊಂದಿಗೆ ಸತತ ಸಂಪರ್ಕದಲ್ಲಿದ್ದು, ಕಾಲಮಿತಿಯಲ್ಲಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳನ್ನು ಹೊರಗಟ್ಟುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಎಲ್ಲ ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯಗಳಲ್ಲಿ ವಾಸಿಸುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ. ಜೊತೆಗೆ ಯಾವೊಬ್ಬ ಪಾಕಿಸ್ತಾನಿ ಪ್ರಜೆಯೂ ಕೇಂದ್ರ ಸರ್ಕಾರ ನೀಡಿರುವ ಗಡುವನ್ನು ಮೀರಿ ದೇಶದಲ್ಲಿ ಉಳಿಯದಂತೆ ನೋಡಿಕೊಳ್ಳಬೇಕೆಂದು ಅವರು ನಿರ್ದೇಶಿಸಿದ್ದಾರೆ.