ಶ್ರೀನಗರ, ಏ.23 (DaijiworldNews/AA): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ನಡೆದ ಭಯೋತ್ಪಾದಕರ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲಿದ್ ಎನ್ನುವುದು ದೃಢಪಟ್ಟಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ 'ದಿ ರೆಸಿಸ್ಟೆನ್ಸ್ ಫ್ರಂಟ್' (ಟಿಆರ್ಎಫ್) ಹೊತ್ತುಕೊಂಡಿದೆ. ಲಷ್ಕರ್ ಸಂಘಟನೆಯ ಟಾಪ್ ಕಮಾಂಡರ್ ಆಗಿರುವ ಸೈಫುಲ್ಲಾ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಈ ಕೃತ್ಯದ ಹಿಂದೆ ಇರುವುದಾಗಿ ಮೂಲಗಳು ತಿಳಿಸಿವೆ
ಲಷ್ಕರ್-ಎ-ತೈಬಾ ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಖಾಲಿದ್ ಮುಂಬೈ ದಾಳಿ ಸೂತ್ರಧಾರ ಹಫೀಜ್ ಸಯೀದ್ ಆಪ್ತನಾಗಿದ್ದಾನೆ. ಯಾವಾಗಲೂ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವ ಈತನಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದಿರುವ ಲಷ್ಕರ್ ಉಗ್ರರು ಭದ್ರತೆ ಒದಗಿಸುತ್ತಾರೆ.
ಈ ಭಯೋತ್ಪಾದಕ ದಾಳಿಯಲ್ಲಿ ಇದುವರೆಗೆ 26 ಜನರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಪೈಕಿ ಹೆಚ್ಚಿನವರು ಪ್ರವಾಸಿಗರಾಗಿದ್ದಾರೆ. ಮೃತರ ಪೈಕಿ ಇಬ್ಬರು ವಿದೇಶಿಯರು (ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೇಪಾಳದವರು) ಮತ್ತು ಇಬ್ಬರು ಸ್ಥಳೀಯ ನಿವಾಸಿಗಳಾಗಿದ್ದಾರೆ. ಇನ್ನು ಮೃತಪಟ್ಟ 26 ಜನರಲ್ಲಿ 22 ಜನರನ್ನು ಗುರುತಿಸಲಾಗಿದ್ದು, ಉಳಿದವರನ್ನು ಗುರುತಿಸಲಾಗುತ್ತಿದೆ.