ನವದೆಹಲಿ, ಏ.20 (DaijiworldNews/AA): 'ನ್ಯಾಷನಲ್ ಹೆರಾಲ್ಡ್ ಪ್ರಕರಣ ಹಾಗೂ ವಕ್ಫ್ ಕಾಯ್ದೆ ವಿರುದ್ಧದ ಕಾನೂನೂ ಹೋರಾಟದಲ್ಲಿ ನಾವು ಗೆಲ್ಲುತ್ತೇವೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಉಸ್ತುವಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಪಕ್ಷದ ಮಾಜಿ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಹೆಸರು ಉಲ್ಲೇಖಿಸಲಾಗಿದೆ. ದೆಹಲಿ, ಲಖನೌ ಹಾಗೂ ಮುಂಬೈನಲ್ಲಿರುವ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರತೀಕಾರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ವಕ್ಫ್ ಕಾಯ್ದೆಗೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಎತ್ತಿದ್ದ ಅಂಶಗಳಿಗೆ ಸುಪ್ರೀಂ ಕೋರ್ಟ್ ಮಹತ್ವ ನೀಡಿದೆ. ಈ ಕಾಯ್ದೆ ವಿಚಾರಕ್ಕೆ ಸಂಬಂಧಿಸಿ ವಿಪಕ್ಷಗಳಲ್ಲಿ ಕಾಂಗ್ರೆಸ್ ಒಗ್ಗಟ್ಟು ಮೂಡಿಸಿದೆ. ಇನ್ನು ನಮ್ಮ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಕ್ರಮ ಕೈಗೊಳ್ಳುವ ಮೂಲಕ ನಮ್ಮನ್ನು ಹೆದರಿಸಲಾಗದು ಎಂದು ಹೇಳಿದ್ದಾರೆ.