ಅಹಮದಾಬಾದ್, ಏ.09 (DaijiworldNews/AA): ಯಾರು ಪಕ್ಷದ ಕೆಲಸದಲ್ಲಿ ಸಹಾಯ ಮಾಡುವುದಿಲ್ಲವೋ ಅವರು ವಿಶ್ರಾಂತಿ ಪಡೆಯಲಿ. ಯಾರು ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುವುದಿಲ್ಲವೋ ಅವರು ನಿವೃತ್ತಿ ಪಡೆಯಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಎಐಸಿಸಿ ಅಧಿವೇಶನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಪಕ್ಷದ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷರ ಪಾತ್ರ ಪ್ರಮುಖವಾಗಿದೆ. ಆದ್ದರಿಂದ, ಎಐಸಿಸಿ ಮಾರ್ಗಸೂಚಿಯಂತೆ ಜಿಲ್ಲಾಧ್ಯಕ್ಷರ ನೇಮಕವನ್ನು ಕಟ್ಟುನಿಟ್ಟಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡಬೇಕು. ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಒಂದು ವರ್ಷದೊಳಗೆ ಜನರನ್ನು ಸೇರಿಸಿಕೊಂಡು ಬೂತ್ ಸಮಿತಿ, ಮಂಡಲ ಸಮಿತಿ, ಬ್ಲಾಕ್ ಸಮಿತಿ ಮತ್ತು ಜಿಲ್ಲಾ ಸಮಿತಿಗಳನ್ನು ರಚಿಸಬೇಕು ಎಂದರು.
ದೇಶದ ಎಲ್ಲಾ ಜಿಲ್ಲಾಧ್ಯಕ್ಷರೊಂದಿಗೆ ಮೂರು ಸಭೆ ನಡೆಸಿದ್ದೇವೆ. ಈ ವೇಳೆ ನಾನು ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆದುಕೊಂಡಿದ್ದೇವೆ. ಭವಿಷ್ಯದಲ್ಲಿ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲಾಧ್ಯಕ್ಷರು ಒಳಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದೀಗ ಮತ್ತೆ ನಾವು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ಶತ್ರುಗಳು ಮತ್ತೆ ಅನ್ಯಾಯ, ಅಸಮಾನತೆ, ತಾರತಮ್ಯ, ಬಡತನ ಮತ್ತು ಕೋಮುವಾದವನ್ನು ಉತ್ತೇಜಿಸುತ್ತಿದ್ದಾರೆ. ಒಂದೇ ವ್ಯತ್ಯಾಸವೆಂದರೆ ಆಗ ಇದನ್ನು ವಿದೇಶಿಯರು ಮಾಡುತ್ತಿದ್ದರು, ಈಗ ನಮ್ಮದೇ ಸರ್ಕಾರ ಮಾಡುತ್ತಿದೆ. ಆದರೆ, ಈ ಸಮರದಲ್ಲಿಯೂ ನಾವು ವಿಜಯಶಾಲಿಯಾಗಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.