ಹಾಸನ, ಏ.08 (DaijiworldNews/AK):ಜನವಿರೋಧಿ, ಬಡವರ ವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಸಂಕಲ್ಪ ಮಾಡಿ ಮೈಸೂರು, ಮಂಡ್ಯದ ಮೂಲಕ ಜನಾಕ್ರೋಶ ಯಾತ್ರೆಯು ಹಾಸನಕ್ಕೆ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ‘ಜನಾಕ್ರೋಶ ಯಾತ್ರೆ’ಯು ಇಂದು ಸಂಜೆ ಹಾಸನದ ಹಳೇ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭಗೊಂಡಿತು. ನಂತರ ಎನ್.ಆರ್ ವೃತ್ತದ ಮಾರ್ಗವಾಗಿ ಮಹಾವೀರ ವೃತ್ತದ ಬಳಿ ಬಹಿರಂಗ ಪ್ರತಿಭಟನಾ ಸಮಾವೇಶ ನಡೆಸಲಾಯಿತು. ‘ಈ ಜನಾಕ್ರೋಶ ಯಾತ್ರೆಗೆ ವರುಣದೇವನೂ ಬಿಜೆಪಿಯವರಿಗೆ ಜಯವಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ’ ಎಂದು ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಅಭಿವೃದ್ಧಿ ಮಾಡುತ್ತೇವೆ; ಜನಪರ ಸರಕಾರ ಕೊಡುವುದಾಗಿ ತಿಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನ ಸರಕಾರ ಬಂದಾಗಿನಿಂದ 50 ಕ್ಕೂ ಹೆಚ್ಚು ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದ್ದಾರೆ ಎಂದು ಟೀಕಿಸಿದರು.
ಈ ಸರಕಾರ ಬೀಳಿಸಲು ಕಾಂಗ್ರೆಸ್ ಶಾಸಕರೇ ಸಾಕು..ಸರಕಾರ ಮನಬಂದಂತೆ- ಜನವಿರೋಧಿಯಾಗಿ ವರ್ತಿಸುತ್ತಿದೆ. ಈ ಸರಕಾರದ ಕಿವಿ ಹಿಂಡುವ ಕಾರ್ಯವನ್ನು ವಿಪಕ್ಷದ ನೆಲೆಯಲ್ಲಿ ಮಾಡುತ್ತಿದ್ದೇವೆ ಎಂದು ವಿಜಯೇಂದ್ರ ಅವರು ವಿವರಿಸಿದರು.ಚುನಾವಣೆ ಬಂದಿದೆ ಎಂದು ಈ ಯಾತ್ರೆಯಲ್ಲ ಎಂದರು.
ಈ ಸರಕಾರ ಬೀಳಿಸಲು ಕಾಂಗ್ರೆಸ್ ಪಕ್ಷದ ಶಾಸಕರೇ ಸಾಕು ಎಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ಕಾಂಗ್ರೆಸ್ಸಿನ ಆರ್.ವಿ.ದೇಶಪಾಂಡೆಯವರು, ಶಾಸಕರಾಗಿ 20 ತಿಂಗಳಾದರೂ ಅಭಿವೃದ್ಧಿಗೆ ಅನುದಾನ ಸಿಕ್ಕಿಲ್ಲ ಎನ್ನುತ್ತಾರೆ. ಬೆಳಗಾವಿಯ ಹಿರಿಯ ಕಾಂಗ್ರೆಸ್ ಶಾಸಕ ರಾಜು ಕಾಗೆಯವರು ಅನುದಾನ ಸಿಗದ ಕುರಿತು ಆತ್ಮಹತ್ಯೆ ಮಾಡಿಕೊಳ್ಳುವಂತಾಗುತ್ತಿದೆ ಎಂದಿದ್ದಾರೆ ಎಂದು ಗಮನ ಸೆಳೆದರು.