ನವದೆಹಲಿ, ಏ.06(DaijiworldNews/TA): ಈಶಾನ್ಯ ದೆಹಲಿಯ ವಜೀರಾಬಾದ್ ಪ್ರದೇಶದ ಪೊಲೀಸ್ 'ಮಲ್ಖಾನಾ' (ಅಂಗಳ)ದಲ್ಲಿ ಭಾನುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, 150 ಕ್ಕೂ ಹೆಚ್ಚು ವಾಹನಗಳು ಹಾನಿಯಾಗಿವೆ ಎಂದು ವರದಿಯಾಗಿದೆ.

ಬೆಳಗಿನ ಜಾವ 4:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರಿಂದ ತ್ವರಿತ ಕಾರ್ಯಾಚರಣೆ ಆರಂಭವಾಯಿತು. ಬೆಂಕಿಯನ್ನು ನಂದಿಸಲು ಒಟ್ಟು ಏಳು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎನ್ನಲಾಗಿದೆ.
ಬೆಳಿಗ್ಗೆ 6:20 ರ ಹೊತ್ತಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಪೊಲೀಸ್ ಮೂಲದ ಪ್ರಕಾರ, ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳು ಸೇರಿದಂತೆ 150 ಕ್ಕೂ ಹೆಚ್ಚು ವಾಹನಗಳು ಬೆಂಕಿಯಿಂದ ಸುಟ್ಟುಹೋಗಿವೆ. ಬೆಂಕಿಯ ಕಾರಣವನ್ನು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಂಡಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.