ಬೆಂಗಳೂರು, ಏ.06 (DaijiworldNews/AA): ಬಿಜೆಪಿಯವರಿಗೆ ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಅಭ್ಯಾಸವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರ ಹಲವಾರು ಕಾರ್ಯಕರ್ತರ ಪಟ್ಟಿಗೆ ಈ ಹೆಸರು ಸೇರುತ್ತದೆ. ಪರಮೇಶ್ ಮೇಸ್ತಾ, ಶಿವಮೊಗ್ಗ ಯುವಕನ ಕೇಸ್ ಮೊನ್ನೆ ಬೀದರ್ನಲ್ಲಿ ಒಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡ. ಇವರ ಹೆಸರಿನ ಮೇಲೆ ಬಿಜೆಪಿ ರಾಜಕೀಯ ಮಾಡಿದ ಉದಾಹರಣೆ ಇದೆಯಲ್ವಾ. ಅವರು ಪ್ರಕರಣದ ಸತ್ಯಾಂಶವನ್ನು ನೋಡುವುದಿಲ್ಲ. ಸುಮ್ಮನೆ ದುರುದ್ದೇಶದಿಂದ ರಾಜಕೀಯ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಡೆತ್ನೋಟ್ನಲ್ಲಿ ಪೊನ್ನಣ್ಣ, ಮಂಥರ್ ಗೌಡ ಹೆಸರಿದೆಯಾ? ಅದು ವಾಟ್ಸಪ್ ಮೆಸೇಜ್. ಇದೇ ರಾಜಕೀಯವನ್ನು ಕಲಬುರಗಿಯಲ್ಲಿ ಮಾಡಿದ್ದಾರೆ. ಇವರು ಸುಮ್ಮನೆ ಹೈಕಮಾಂಡ್ ಮನವೊಲಿಸಲು ಹಾಗೂ ಇವರ ಅಸ್ತಿತ್ವ ತೋರಿಸಿಕೊಳ್ಳಲು ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಕೇಸ್ ಸಾಬೀತಾಗಿಲ್ಲ. ಯಾವುದಾದರೂ ಒಂದು ಕೇಸ್ ಅನ್ನು ಸಾಬೀತು ಮಾಡಿದ್ದಾರಾ? ಬಿಜೆಪಿಯವರು ಯಾರು ಕಾಳಜಿ ವಹಿಸಿದ್ದಾರೆ. ನೂರಾರು ಕಾರ್ಯಕರ್ತರ ಪಟ್ಟಿಗೆ ಈ ಹೆಸರು ಒಂದು ಸೇರ್ಪಡೆಯಾಗಿದೆ. ಬಿಜೆಪಿಯವರ ರಾಜಕೀಯ ಅಸ್ತಿತ್ವವೇ ಇಷ್ಟು ಎಂದು ಆಕ್ರೋಶ ಹೊರಹಾಕಿದರು.
ವಿನಯ್ ಸೋಮಯ್ಯ ಪ್ರಕರಣ ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಇವರು ಹನಿಟ್ರ್ಯಾಪ್ ಸಿಬಿಐ ಕೊಡಿ ಎಂದು ಹೇಳುತ್ತಾರೆ. ಇದನ್ನು ಸಿಬಿಐಗೆ ಕೊಡಿ ಎಂದು ಕೇಳುತ್ತಿದ್ದಾರೆ. ಸಿಬಿಐ ಅವರೇ ಪತ್ರ ಬರೆದಿದ್ದಾರೆ. ನೀವು ನಮಗೆ ಕೇಸ್ ಕೊಡಬೇಡಿ. ಆಕಸ್ಮಾತ್ ಕೇಸ್ ಕೊಟ್ಟರೆ ಅದಕ್ಕೆ ಸಿಬ್ಬಂದಿಯನ್ನು ನೀವೇ ಕೊಡಬೇಕು. ಸಾರಿಗೆ ವ್ಯವಸ್ಥೆ ನೀವೇ ಕೊಡಬೇಕು. ಅದರ ಶುಲ್ಕ ನೀವೇ ಪಾವತಿಸಬೇಕು. ಕರ್ನಾಟಕ ಪೊಲೀಸರ ಸಹಾಯ ಪಡೆದೇ ತನಿಖೆ ಮಾಡುತ್ತೇವೆ. ನಾವು ಸ್ವತಂತ್ರವಾಗಿ ತನಿಖೆ ಮಾಡಲು ಆಗುವುದಿಲ್ಲ ಎಂದು ಬರೆದಿದ್ದಾರೆ ಎಂದರು.