ಮೈಸೂರು, ಏ.04(DaijiworldNews/AK):ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕೆ.ಆರ್.ನಗರದ ಸಂತ್ರಸ್ತೆಯನ್ನು ಅಪರಹರಿಸಿರುವ ಆರೋಪ ಹೊತ್ತಿರುವ ಭವಾನಿ ರೇವಣ್ಣ ಅವರು ಹಾಸನ ಮತ್ತು ಮೈಸೂರಿಗೆ ತೆರಳಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಇದೀಗ, ಹೈಕೋರ್ಟ್ ಷರತ್ತನ್ನು ಸಡಿಲಿಸಿದ್ದು, ಹಾಸನ ಮತ್ತು ಮೈಸೂರು ಜಿಲ್ಲೆಗೆ ಪ್ರವೇಶಿಸಬಹುದು ಎಂದಿದೆ. ಆದರೆ, ಸಂತ್ರಸ್ತೆ ಮತ್ತು ಪ್ರಕರಣದ ಸಾಕ್ಷಿಗಳ ಮನೆಯ 500 ಮೀಟರ್ ಸುತ್ತಳತೆ ಪ್ರವೇಶಿಸುವಂತಿಲ್ಲ ಎಂದು ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಹೊಸ ಷರತ್ತು ವಿಧಿಸಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋದಲ್ಲಿ ನನ್ನ ತಾಯಿಯ ಚಿತ್ರವೂ ಇದ್ದು, ಇದೀಗ ಅವರು ಕಣ್ಮರೆಯಾಗಿದ್ದಾರೆ” ಎಂದು 2024ರ ಮೇ 2ರ ತಡರಾತ್ರಿ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ದೂರು ನೀಡಿದ್ದರು. ಹೆಚ್ಡಿ ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿತ್ತು.
ದೂರು ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗಾಗಿ ಭವಾನಿ ರೇವಣ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ 2024ರ ಜೂನ್ 18 ರಂದು ಭವಾನಿ ರೇವಣ್ಣ ಅವರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು.