ನವದೆಹಲಿ,ಡಿ.03 (DaijiworldNews/TA): ತಾಜ್ ಮಹಲ್ ಸ್ಫೋಟಿಸುವ ಬೆದರಿಕೆಯ ಇಮೇಲ್ ಮಂಗಳವಾರ ಇಲ್ಲಿನ ಉತ್ತರ ಪ್ರದೇಶ ಪ್ರವಾಸೋದ್ಯಮದ ಪ್ರಾದೇಶಿಕ ಕಚೇರಿಗೆ ಬಂದಿದ್ದು, ನಂತರ ಅದು ಹುಸಿ ಬೆದರಿಕೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಇತರ ತಂಡಗಳ ಪರಿಶೀಲನೆ ಬಳಿಕ ಇದೊಂದು ಹುಸಿ ಬೆದರಿಕೆ ಎಂದು ತಾಜ್ನ ಭದ್ರತಾ ಸಿಬ್ಬಂಧಿ ಎಸಿಪಿ ಸೈಯದ್ ಅರೀಬ್ ಅಹ್ಮದ್ ತಿಳಿಸಿದ್ದಾರೆ.
“ತಾಜ್ ಮಹಲ್ ಸ್ಫೋಟಿಸುವ ಬೆದರಿಕೆಯ ಇಮೇಲ್ ಉತ್ತರ ಪ್ರದೇಶದ ಪ್ರವಾಸೋದ್ಯಮ ಕಚೇರಿಗೆ ಬಂದಿತ್ತು. ಇಮೇಲ್ ಪ್ರಕಾರ ನಮಗೆ ಏನೂ ಕಂಡುಬಂದಿಲ್ಲ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಇತರ ತಂಡಗಳು ತಾಜ್ಮಹಲ್ಗೆ ಸುರಕ್ಷತಾ ತಪಾಸಣೆಗಾಗಿ ತಲುಪಿವೆ,'' ಎಂಬುವುದಾಗಿ ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಪ್ರವಾಸೋದ್ಯಮದ ಉಪ ನಿರ್ದೇಶಕಿ ದೀಪ್ತಿ ವತ್ಸಾ ಪ್ರಕಾರ, ಬಾಂಬ್ ಬೆದರಿಕೆಗೆ ಸಂಬಂಧಿಸಿದ ಇಮೇಲ್ ಅನ್ನು ತಕ್ಷಣವೇ ಆಗ್ರಾ ಪೊಲೀಸ್ ಮತ್ತು ಎಎಸ್ಐ, ಆಗ್ರಾ ವೃತ್ತಕ್ಕೆ ಕ್ರಮಕ್ಕಾಗಿ ರವಾನಿಸಲಾಗಿದೆ ಎನ್ನಲಾಗಿದೆ.
ತಾಜ್ ಮಹಲ್ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದ್ದು, ಇದನ್ನು ಮೊಘಲ್ ಚಕ್ರವರ್ತಿ ಷಹಜಹಾನ್ 1648ರಲ್ಲಿ ತನ್ನ ಪತ್ನಿ ಮುಮ್ತಾಜ್ ಮಹಲ್ ನೆನಪಿಗಾಗಿ ನಿರ್ಮಿಸಿದ್ದಾನೆ ಎಂಬುವುದು ಐತಿಹ್ಯ. ಈ ಅಮೋಘ ಸೌಂದರ್ಯ ಸೌಧವನ್ನು ನೋಡಲು ಎಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ.