ಬೆಂಗಳೂರು,ಮೇ26(DaijiworldNews/AZM):ರಾಜ್ಯ ಸರಕಾರವು ಹಲವು ಜಯಂತಿಗಳಂದು ನೀಡುವ ರಜೆಗಳನ್ನು ರದ್ದು ಮಾಡುವ ಕುರಿತಂತೆ ಇಂದು ನಡೆಯುವ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇನ್ನು ೨ನೇ ಶನಿವಾರದಂತೆ ನಾಲ್ಕನೇ ಶನಿವಾರದಂದು ರಜೆ ನೀಡುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಸಂಪುಟ ಉಪಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹೆಚ್ಚುವರಿ ಕಾರ್ಯಸೂಚಿಯಲ್ಲಿ ಸಂಪುಟದ ಮುಂದೆ ಮಂಡನೆಯಾಗಲಿದೆ ಎನ್ನಲಾಗಿದೆ.
ಆರನೇ ವೇತನ ಆಯೋಗದ ಶಿಫಾರಸಿನಂತೆ ಜಯಂತಿಗಳನ್ನು ರದ್ದು ಮಾಡುವ ಬಗ್ಗೆ ಪರಿಶೀಲನೆಗೆ ಉಪ ಸಮಿತಿ ರಚನೆಯಾಗಿತ್ತು. ಸರ್ಕಾರಿ ನೌಕರರ ಸಿಎಲ್ ಗಳಲ್ಲಿ ಮೂರನ್ನು ರದ್ದು ಮಾಡುವುದು, ರಾಜ್ಯ ಸರ್ಕಾರ ನೀಡುವ ವಿವಿಧ ಎಂಟು ಜಯಂತಿಗಳ ರಜೆಯನ್ನು ತೆಗೆದು ಹಾಕುವುದು, ಎರಡನೇ ಶನಿವಾರದ ರೀತಿಯಲ್ಲಿ ನಾಲ್ಕನೇ ಶನಿವಾರವೂ ರಜೆ ನೀಡುವ ಕುರಿತು ವರದಿಯಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ."